ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮೈಕ್ಯ

ರಾಯಚೂರಿನ ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮೈಕ್ಯರಾದರು. ಮುಂಜಾನೆ ಹೃದಯಾಘಾತದಿಂದ ಅ್ವಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಫಲಕಾರಿಯಾಗಲಿಲ್ಲ. ಈ ಮಠದ ಜತೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿಕಟ ಸಂಪರ್ಕ ಹೊಂದಿದ್ದರು.

ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಬ್ರಹ್ಮೈಕ್ಯ
ಸಿದ್ದರಾಮನಂದ ಸ್ವಾಮೀಜಿ
Edited By:

Updated on: Jan 15, 2026 | 9:25 AM

ರಾಯಚೂರು, ಜನವರಿ 15: ರಾಯಚೂರಿನ (Raichur) ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ (49) (Siddaramananda Swamiji) ಅವರು ಹೃದಯಾಘಾತದಿಂದ ಬ್ರಹ್ಮೈಕ್ಯರಾಗಿದ್ದಾರೆ. ಮಂಗಳವಾರ ಮುಂಜಾನೆ ಸುಮಾರು 3.40ರ ವೇಳೆಗೆ ಸ್ವಾಮೀಜಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಲಿಂಗಸೂಗೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಅವರು ನಿಧನರಾದರು.

ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿಯಿರುವ ಕಾಗಿನೆಲೆ ಕನಕ ಗುರುಪೀಠದ ಮೂಲಕ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಿದ್ದರಾಮನಂದ ಸ್ವಾಮೀಜಿ ಸಕ್ರಿಯರಾಗಿದ್ದರು. ಜನವರಿ 12, 13 ಮತ್ತು 14ರಂದು ನಡೆದ ಹಾಲುಮತ ಉತ್ಸವ ಕಾರ್ಯಕ್ರಮಗಳನ್ನು ಅವರು ಸ್ವತಃ ನಡೆಸಿಕೊಟ್ಟಿದ್ದರು.

ಕಳೆದ 2023 ಮತ್ತು 2024ರಲ್ಲಿ ಇದೇ ಮಠದ ಉತ್ಸವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರೊಂದಿಗೆ ಗುರುಪೀಠದ ಆತ್ಮೀಯ ಸಂಪರ್ಕ ಇತ್ತು. ಸಿದ್ದರಾಮನಂದ ಸ್ವಾಮೀಜಿಗಳ ಅಕಾಲಿಕ ನಿಧನದಿಂದ ರಾಜ್ಯಾದ್ಯಂತ ಅವರ ಭಕ್ತರಲ್ಲಿ ಶೋಕದ ವಾತಾವರಣ ಆವರಿಸಿದೆ.

ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ

ಅಗಲಿದ ಕಾಗಿನೆಲೆ ಕನಕ ಪೀಠದ ಸ್ವಾಮೀಜಿಗೆ ನಮನ. ದೇವದುರ್ಗ ಬಳಿಯ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಅವರು ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ


ಸ್ವಾಮೀಜಿಯವರು ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಸೇರಿದಂತೆ ಸದಾ ಜನಪರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಸ್ವಾಮೀಜಿಯವರು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಭಕ್ತರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್​ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಕರ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 am, Thu, 15 January 26