ರಾಯಚೂರು, ಜು.17: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಇಡಿ(ED) ತನಿಖೆಯಲ್ಲಿ ಬಗೆದಷ್ಟು ಸತ್ಯ ಬಯಲಾಗುತ್ತಿದೆ. ಈಗಾಗಲೇ ಇಡಿ ಕುಣಿಕೆಯಲ್ಲಿರುವ ಮಾಜಿ ಸಚಿವ ನಾಗೇಂದ್ರ, ನೆಕ್ಕಂಟಿ ನಾಗರಾಜ್ ತನ್ನ ಪರಿಯಸ್ಥರಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ರಾಯಚೂರಿನ ಸಿಂಧನೂರು ತಾಲ್ಲೂಕಿನ ಬೂದಿವಾಳ ಕ್ಯಾಂಪ್ನ ನಿವಾಸಿ ಕೋನ ವೆಂಕಟರೆಡ್ಡಿ ಹಾಗೂ ಆತನ ಕುಟುಂಬಸ್ಥರಿಗೆ ಹಣ ಹಾಕಿರುವ ಸತ್ಯ ಇಡಿ ತನಿಖೆ ವೇಳೆ ಗೊತ್ತಾಗಿದೆ.
ಹೌದು, ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಸಂಬಂಧಿ ಎಂದು ಹೇಳಲಾಗುತ್ತಿರುವ ಕೋನ ವೆಂಕಟರೆಡ್ಡಿ ಹಾಗೂ ಅವರ ಕುಟುಂಬಸ್ಥರ ಅಕೌಂಟ್ಗಳಿಗೆ ನೆಕ್ಕಂಟಿ ನಾಗರಾಜ್ ಹಣ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ನಾಗರಾಜ್, ಕೋನ ವೆಂಕಟರೆಡ್ಡಿಯ ಬೂದಿವಾಳದಲ್ಲಿರುವ ಕರ್ನಾಟಕ ಬ್ಯಾಂಕ್ ಅಕೌಂಟ್ಗೆ 12 ಲಕ್ಷ, ಅವರ ಪುತ್ರಿಯರಾದ ಲಕ್ಷ್ಮೀದೇವಿ ಅಕೌಂಟ್ ಗೆ 25 ಲಕ್ಷ, ರತ್ನ ಕುಮಾರಿ ಅಕೌಂಟ್ಗೆ 25 ಲಕ್ಷ ಹಾಗೂ ವೆಂಕಟರೆಡ್ಡಿ ಮೊಮ್ಮಗ ಸಂದೀಪ್ಗೆ 25 ಲಕ್ಷ ರೂ. ಹೀಗೆ ಹಂತ ಹಂತವಾಗಿ 98 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಅಲ್ಲ: ಹಗರಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಡಿ
ನೆಕ್ಕಂಟಿ ನಾಗರಾಜ್ ಮೂಲಕ ಹಣ ವರ್ಗಾವಣೆ ಬಗ್ಗೆ ನಮಗೇನು ಗೊತ್ತಿಲ್ಲ. ನಾಗರಾಜ್ ಬರೀ ಪರಿಚಯ ಅಷ್ಟೆ ಎಂದು ಕೋನ ವೆಂಕಟರೆಡ್ಡಿ ಹೇಳ್ತಿದ್ದಾರೆ. ಈ ಟ್ರಾನ್ಸಾಕ್ಷನ್ ಬಳಿಕ ಸಿಬಿಐ ಅಧಿಕಾರಿಗಳು, ಕರ್ನಾಟಕ ಬ್ಯಾಂಕ್ ನ ಮ್ಯಾನೇಜರ್ಗೆ ಕೋನ ವೆಂಕಟರೆಡ್ಡಿ ಹಾಗೂ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಕೋನ ವೆಂಕಟರೆಡ್ಡಿ ಹಾಗೂ ಕುಟುಂಬಸ್ಥರ ಬ್ಯಾಂಕ್ ಖಾತೆಗಳೀಗ ಫ್ರೀಜ್ ಆಗಿದ್ದು, ತನಿಖೆ ನಡೀತಿದೆ.
ಇತ್ತ ದದ್ದಲ್ ಒಟ್ಟು ಆಸ್ತಿ ವಿವರ ಕೆದಕಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ದದ್ದಲ್ ಜೊತೆ ವ್ಯವಹರಿಸಿದ್ದವರಿಗೂ ಇಡಿ ಖೆಡ್ಡಾ ತೋಡಲು ಮುಂದಾಗಿದೆ. ದದ್ದಲ್ಗೆ ಜಮೀನು ಮಾರಾಟ ಮಾಡಿರೋರಿಗೆ ಕೋಟ್ಯಾಂತರ ರೂ.ನಗದು ರೂಪದಲ್ಲಿ ಹಣ ಸಂದಾಯ ಆಗಿರುವ ಶಂಕೆ ಹಿನ್ನೆಲೆ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ