ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಅಲ್ಲ: ಹಗರಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಡಿ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರದ ರಹಸ್ಯ ಬಗೆದಷ್ಟು ಬಯಲಾಗುತ್ತಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಈ ಹಗರಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ವಿಪಕ್ಷ ಬಿಜೆಪಿ, ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಆದ್ರೆ, ಎಷ್ಟು ಕೋಟಿ ರೂ. ಹಗರಣವಾಗಿದೆ ಎನ್ನುವುದು ಗೊಂದಲ ಸೃಷ್ಟಿದ್ದು, ಇದೀಗ ಇಡಿ, ಎಷ್ಟು ಕೋಟಿ ರೂಪಾಯಿ ಹಗರಣವಾಗಿದೆ ಎನ್ನುವುದನ್ನು ಅಧಿಕೃತ ಮಾಹಿತಿ ಬಿಚ್ಚಿಟ್ಟಿದೆ.
ಬೆಂಗಳೂರು, (ಜುಲೈ 17): ವಾಲ್ಮೀಕಿ ನಿಗದಲ್ಲಿ ನಡೆದ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಬರೋಬ್ಬರಿ 187 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ ಎಂದು ವಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. 187 ಕೋಟಿಯಲ್ಲ. ವರ್ಗಾವಣೆಯಾಗಿರುವುದು 89.62 ಕೋಟಿ ರೂ. ಮಾತ್ರ ಎಂದು ಸ್ವತಃ ಸ್ವತಃ ಸಿಎಂ ಸಿದ್ದರಾಮಯ್ಯ ಸದನದಲ್ಲಿ ವಿಪಕ್ಷಗಳ ಮೇಲೆ ಗರಂ ಆಗಿದ್ದರು. ಈ ಹಿನ್ನೆಲೆಯಲ್ಲಿ ಎಷ್ಟು ಕೋಟಿ ರೂ.ಅವ್ಯವಹಾರವಾಗಿದೆ ಎಂದು ಹಲವರಿಗೆ ಗೊಂದಲವಾಗಿತ್ತು. ಇದೀಗ ಇದಕ್ಕೆ ಇಡಿ ಅಧಿಕೃತ ಅಂಕಿ-ಅಂಶಗಳನ್ನು ನೀಡಿದ್ದು, ಒಟ್ಟು 89.65 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯದಿಂದ ವಿಸ್ತೃತ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಇಡಿ ಮಾಧ್ಯಮ ಪ್ರಕಟಣೆಯ್ಲಲೇನಿದೆ?
ವಿಸ್ತೃತ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಾರಿ ನಿರ್ದೇಶನಾಲಯ, ವಾಲ್ಮೀಕಿ ಹಗರಣ ಸಂಬಂಧ ನಾಲ್ಕು ರಾಜ್ಯಗಳ 23 ಕಡೆ ದಾಳಿ ನಡೆಸಿದ್ದೇವೆ. 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, ನಂತರ ಹಲವು ನಕಲಿ ಅಕೌಂಟ್‌ಗಳಿಗೆ ಹೋಗಿ ಕ್ಯಾಶ್ ಆಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ನಾಗೇಂದ್ರ, ಬಸನಗೌಡ ದದ್ದಲ್ (ವಾಲ್ಮೀಕಿ ನಿಗಮದ ಅಧ್ಯಕ್ಷ) ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Video: ನಾಗೇಂದ್ರ ಪತ್ನಿ ವಿಚಾರಣೆ ಅಂತ್ಯ: ಹೇಗೆ ಕರೆತಂದಿದ್ದರೋ ಹಾಗೇ ಬಿಟ್ಟುಬಂದ ಇಡಿ ಅಧಿಕಾರಿಗಳು
ಮೇ 26ರಂದು ನಿಗಮದ ಉದ್ಯೋಗಿ ಚಂದ್ರಶೇಖರನ್ ಆತ್ಮಹತ್ಯೆಯ ಬಳಿಕ ರಾಜ್ಯ ಪೊಲೀಸರು ಹಾಗೂ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಅಕ್ರಮದ ಬೆನ್ನತ್ತಿ ಹೊರಟಾಗ ಗಣನೀಯ ಪ್ರಮಾಣದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಲಾಗಿದೆ. ಇದರೊಂದಿಗೆ ಅಕ್ರಮದಲ್ಲಿ ಬಂದ ಇತರೇ ಹಣವನ್ನು ಬಳಸಿಕೊಂಡು ಲ್ಯಾಂಬೋರ್ಗಿನಿ ಸೇರಿದಂತೆ ಐಷಾರಾಮಿ ವಾಹನಗಳನ್ನ ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಮಾಜಿ ಸಚಿವ ನಾಗೇಂದ್ರ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನಗದು ನಿರ್ವಹಣೆಯಲ್ಲಿ ತೊಡಗಿದ್ದ ಸಹವರ್ತಿಗಳ ಬಗ್ಗೆಯೂ ಮಾಹಿತಿ ಬಯಲಾಗಿದೆ. ಅಷ್ಟೇ ಅಲ್ಲದೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ನಿವಾಸದಲ್ಲಿ ಅಕ್ರಮ ಹಣ ನಿರ್ವಹಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಆ ನಂತರ ನಾಗೇಂದ್ರ ಅವರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಜು.18ರ ವರೆಗೆ ಇಡಿ ಕಸ್ಟಡಿಗೆ ನೀಡಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಜಾರಿ ನಿರ್ದೇಶನಾಲಯ ವಿಸ್ತೃತ ಮಾಧ್ಯಮ ಪ್ರಕಟಣೆ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Wed, 17 July 24