ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ; 2000 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಭತ್ತದ ಬೆಳೆ ಜಲಾವೃತ

| Updated By: preethi shettigar

Updated on: Aug 01, 2021 | 2:55 PM

ಪ್ರತಿ ಬಾರಿ ಹೀಗೆ ನೀರು ಬಿಟ್ಟಾಗ ನಾವು ಬೆಳೆಗಳನ್ನು ಕಳೆದುಕೊಂಡರೆ ಹೊಟ್ಟೆಗೆ ಏನು ತಿನ್ನಬೇಕು. ಕೃಷ್ಣ ನದಿ ದಂಡೆಯಲ್ಲಿ ಬೆಳದಿರುವ 2000 ಎಕರೆಗೂ ಅಧಿಕ ಭತ್ತ ಕೃಷ್ಣಾರ್ಪಣವಾಗಿದೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ; 2000 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಭತ್ತದ ಬೆಳೆ ಜಲಾವೃತ
ಬೆಳೆ ಕಳೆದುಕೊಂಡು ರೈತ ಮಹಿಳೆಯರು ಕಂಗಾಲು
Follow us on

ರಾಯಚೂರು: ಕಳೆದ ಕೆಲವು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಪ್ರವಾಹ ಭೀತಿಯಿಂದ ಜನರು ನಲುಗಿ ಹೋಗಿದ್ದಾರೆ. ಹೀಗಿರುವಾಗಲೇ ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮವಾಗಿ ರಾಯಚೂರು ಜಿಲ್ಲೆಯ ನದಿಪಾತ್ರದಲ್ಲಿನ ರೈತರ ಬೆಳೆ ನೀರುಪಾಲಾಗಿದೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಬಳಿ ನೀರಲ್ಲಿ ಮುಳುಗಿದ ಬೆಳೆ ಕಳೆದುಕೊಂಡು ರೈತ ಮಹಿಳೆಯರು ಕಂಗಾಲಾಗಿದ್ದು, ನದಿಗೆ ನೀರು ಬಿಡುವವರನ್ನು ಕುಡುಗೋಲಿನಿಂದ ಕತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಹೀಗೆ ನೀರು ಬಿಟ್ಟಾಗ ನಾವು ಬೆಳೆಗಳನ್ನು ಕಳೆದುಕೊಂಡರೆ ಹೊಟ್ಟೆಗೆ ಏನು ತಿನ್ನಬೇಕು. ಕೃಷ್ಣ ನದಿ ದಂಡೆಯಲ್ಲಿ ಬೆಳದಿರುವ 2000 ಎಕರೆಗೂ ಅಧಿಕ ಭತ್ತ ಕೃಷ್ಣಾರ್ಪಣವಾಗಿದೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ
ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ನೀರು ನುಗ್ಗಿ 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ. ಜಿಲ್ಲೆಯ ರಾಯಬಾಗ ತಾಲೂಕಿನ ಮೊಳವಾಡ ಮತ್ತು ಕುಸಲಾಳ ಸೇರಿ 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ. ಊರು ಮುಳುಗಡೆಯಾದ ಹಿನ್ನೆಲೆ ಪಿಕ್ಅಪ್ ವಾಹನ ಜಾನುವಾರುಗಳನ್ನು ಹೊತ್ತು ತರುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ಎರಡು ಎಮ್ಮೆ ಒಂದು ಎತ್ತು ವಾಹನದಲ್ಲೇ ಒದ್ದಾಡಿ ಜೀವ ಬಿಟ್ಟಿವೆ. ಸ್ಥಳೀಯರು ಜೆಸಿಬಿಯಿಂದ ವಾಹನವನ್ನು ಹೊರತೆಗೆದಿದ್ದಾರೆ. ಆದರೆ ಮೃತಪಟ್ಟ ಜಾನುವಾರುಗಳು ಕೃಷ್ಣಾ ನದಿಯಲ್ಲಿ ತೇಲಿ ಹೋಗಿವೆ.

ಕೃಷ್ಣಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ನದಿಯ ಪ್ರವಾಹಕ್ಕೆ ಅಥಣಿ ತಾಲೂಕಿನ ದರೂರ ಸೇತುವೆ ಮುಳುಗಡೆಯಾಗಿದ್ದು, 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಸೇತುವೆ ಮುಳುಗಡೆಯಿಂದ ಮಹಾರಾಷ್ಟ್ರದ ಜತ್ತ, ಜಾಂಬೋಟಿ ಸಂಪರ್ಕ ಕೂಡ ಕಟ್ ಆಗಿದೆ. ನದಿಯ ಹೊರ ಹರಿವು 4 ಲಕ್ಷದ 10 ಸಾವಿರ ಕ್ಯೂಸೆಕ್ ಇದೆ.

ಹಿರಣ್ಯಕೇಶಿ ನದಿಯಲ್ಲಿ ಹೆಚ್ಚಾದ ನೀರಿನ ಹರಿವು
ಹಿರಣ್ಯಕೇಶಿ ನದಿ ನೀರು ನುಗ್ಗಿ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮ ಮುಳುಗಡೆಯಾಗಿದೆ. ಕಾಳಜಿ ಕೇಂದ್ರಕ್ಕೆ ಬಡಕುಂದ್ರಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಗ್ರಾಮದಲ್ಲಿರುವ ಎಲ್ಲಾ ಮನೆಗಳು ಮುಳುಗಡೆಯಾದ ಹಿನ್ನೆಲೆ ರಾತ್ರೋರಾತ್ರಿ ಊರು ಬಿಟ್ಟು ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ಹೋಗಿದ್ದಾರೆ. ಗ್ರಾಮದಲ್ಲಿರುವ ಪ್ರಸಿದ್ಧ ಹೊಳೆಮ್ಮಾ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ.

ರೋಗಿಗಳ ರಕ್ಷಣೆ
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಕ್ಕೆ ಕೃಷ್ಣಾ ನದಿಯ ನೀರು ನುಗ್ಗಿದೆ. ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯ ಯುವಕರು‌ ರೋಗಿಗಳನ್ನ ಹೆಗಲ ಮೇಲೆ ಹೊತ್ತು ತಂದು ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ಓದಿ:
ರಾಯಚೂರು: ನೀರಿನ ಮಟ್ಟ ಅರಿಯದೇ ಜಲಧಾರೆ ಯೋಜನೆ ಆರಂಭಕ್ಕೆ ಸ್ಥಳೀಯರ ಆಕ್ರೋಶ

Belagavi Flood: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ; 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ, ನೀರಿನಲ್ಲಿ ತೇಲಿ ಹೋದ ಜಾನುವಾರುಗಳು

Published On - 2:53 pm, Sun, 1 August 21