ರಾಯಚೂರು: ವಿದ್ಯುತ್ ಸ್ಥಾವರಕ್ಕೆ ಭೂಮಿ ನೀಡಿದ್ದ ರೈತರ ಬದುಕಲ್ಲಿ ಕತ್ತಲು; ವೈಟಿಪಿಎಸ್ ವಿರುದ್ಧ ಸಿಡಿದ 33 ಕುಟುಂಬಗಳು
ರಾಯಚೂರಿನ ವೈಟಿಪಿಎಸ್ ವಿದ್ಯುತ್ ಸ್ಥಾವರಕ್ಕಾಗಿ ಭೂಮಿ ನೀಡಿರುವ ಭೂ ಸಂತ್ರಸ್ತ ರೈತರು ಉದ್ಯೋಗ ವಂಚನೆ ಎದುರಿಸುತ್ತಿದ್ದಾರೆ. ರಾಜ್ಯಕ್ಕೆ ಬೆಳಕು ನೀಡುವ ಘಟಕದ ಸ್ಥಾಪನೆಗೆ 2012ರಲ್ಲಿ ತಮ್ಮ ಫಲವತ್ತಾದ ಕೃಷಿ ಭೂಮಿ ಕಳೆದುಕೊಂಡ 33 ಕುಟುಂಬಗಳಿಗೆ 10 ವರ್ಷಗಳಾದರೂ ಉದ್ಯೋಗ ಸಿಕ್ಕಿಲ್ಲ. ಆರಂಭದಲ್ಲಿ ನೀಡಿದ ಭರವಸೆಗೆ ವಿರುದ್ಧವಾಗಿ ಹೊಸ ಷರತ್ತುಗಳನ್ನು ವಿಧಿಸಲಾಗಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ.

ಮುಖ್ಯಾಂಶಗಳು
- 10 ವರ್ಷಗಳಿಂದ ಭೂ ಸಂತ್ರಸ್ತ ರೈತರಿಗೆ ಉದ್ಯೋಗವಿಲ್ಲ
- ಕೃಷಿ ಭೂಮಿ ಕಳೆದುಕೊಂಡ 33 ಕುಟುಂಬಗಳು
- ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕುಟುಂಬಗಳು
ರಾಯಚೂರು, ಅಕ್ಟೋಬರ್ 02: ಯರಮರಸ್ ಉಷ್ಣ ವಿದ್ಯುತ್ ಸ್ಥಾವರ (ವೈಟಿಪಿಎಸ್) ಇಡೀ ರಾಜ್ಯಕ್ಕೆ ಬೆಳಕು ನೀಡಿವ ವಿದ್ಯುತ್ ಉತ್ಪಾದನಾ ಘಟಕ. ಆದರೆ ಈ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಫಲವತ್ತಾದ ಕೃಷಿ ಭೂಮಿ ಕೊಟ್ಟ ರಾಯಚೂರಿನ ರೈತರ ಬದುಕಲ್ಲಿ ಕತ್ತಲು ಆವರಿಸಿದೆ. ವರ್ಷಗಳಿಂದ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಭೂ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ವಿರುದ್ಧವೇ ಇದೀಗ ಸಂತ್ರಸ್ತರು ಸಿಡಿದೆದಿದ್ದಾರೆ.
ನ್ಯಾಯಕ್ಕಾಗಿ ಪರಿತಪಿಸುತ್ತಿರುವ 33 ಭೂ ಸಂತ್ರಸ್ತ ಕುಟುಂಬಗಳು
ರಾಯಚೂರು ತಾಲೂಕಿನ ಏಗನೂರು, ಯರಮರಸ್, ಚಿಕ್ಕಸುಗೂರು, ಹೆಗಸನಹಳ್ಳಿ, ದೇವಸುಗೂರು ಗ್ರಾಮದ ರೈತರು ಇದೇ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿ ಕಳೆದುಕೊಂಡಿರುವ ಭೂ ಸಂತ್ರಸ್ತರು. ಈ ಘಟಕ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡು ಹತ್ತು ವರ್ಷ ಕಳೆದರೂ ಉದ್ಯೋಗ ಸಿಗದೇ 33 ಭೂ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಪರಿತಪಿಸುತ್ತಿವೆ.
ಇದನ್ನೂ ಓದಿ: ಇಡೀ ಊರಿಗೆ ಉಪಕಾರ ಮಾಡಿ ಕಂಗಾಲಾದ ರೈತರು: ಕೆರೆಗಾಗಿ ಭೂಮಿ ಕೊಟ್ಟವರಿಗೆ 5 ದಶಕವಾದ್ರೂ ಸಿಕ್ಕಿಲ್ಲ ಪರಿಹಾರ
ರಾಯಚೂರು ತಾಲೂಕಿನಲ್ಲಿರುವ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗಾಗಿ 2012ರಲ್ಲಿ ರೈತರಿಂದ ಬರೋಬ್ಬರಿ 1,150 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ವೇಳೆ ಪ್ರತಿ ಭೂ ಸಂತ್ರಸ್ತ ಕುಟುಂಬದ ಒಬ್ಬರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಭೂಸ್ವಾಧೀನದ ಬಳಿಕ ಕೆಲ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಆದರೆ ಇನ್ನೂ 33 ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಸಿಕ್ಕಿಲ್ಲ ಎಂಬುದು ಸಂತ್ರಸ್ತರ ಆರೋಪ.
ಉದ್ಯೋಗಕ್ಕೆ ಅರ್ಜಿ ಆಹ್ವಾನ: ಷರತ್ತು ವಿಧಿಸಿದ ವೈಟಿಪಿಎಸ್
ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾರಂಭದ ಬಳಿಕ, 2016ರಲ್ಲಿ ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲು ವೈಟಿಪಿಎಸ್ ವತಿಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಹ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳೊಂದಿಗೆ ಸಂತ್ರಸ್ತರು ಅರ್ಜಿ ಸಲ್ಲಿಸಿದ್ದರು. ಆದರೆ ಬಳಿಕ ಉದ್ಯೋಗಕ್ಕೆ ಸಂಬಂಧಿಸಿದಂತೆ ಭೂ ಒಡೆತನಕ್ಕೆ ಸಂಬಂಧಿಸಿದ ಷರತ್ತು ವಿಧಿಸಲಾಗಿದೆ. ಈ ಷರತ್ತನ್ನು ಉಲ್ಲೇಖಿಸಿ ಅರ್ಜಿದಾರರಿಗೆ ಸೂಚನಾ ಪತ್ರ ನೀಡಲಾಗಿದೆ.
ಉದ್ಯೋಗ ನೀಡಿದೆ ವಂಚನೆ: ಸಂತ್ರಸ್ತರ ಅಳಲು
‘ಭರವಸೆ ನೀಡಿದಂತೆ ಯಾವುದೇ ಷರತ್ತಿಲ್ಲದೆ ಅರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಬೇಕು. ಆದರೆ ಈಗ ಹೊಸ ಷರತ್ತು ವಿಧಿಸುವ ಮೂಲಕ ನಮ್ಮನ್ನು ಉದ್ಯೋಗ ನೀಡಿದೆ ವಂಚಿಸಲಾಗುತ್ತಿದೆ’ ಎಂದು ಭೂ ಸಂತ್ರಸ್ತ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ವರ್ಷಗಳ ಕಾಲ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ತಮ್ಮ ಫಲವತ್ತಾದ ಭೂಮಿಯನ್ನು ವೈಟಿಪಿಎಸ್ ಘಟಕಕ್ಕಾಗಿ ನೀಡಿದ್ದಾರೆ. ಆದರೆ ‘ಭೂಮಿ ಕಳೆದುಕೊಂಡು ಹತ್ತು ವರ್ಷ ಕಳೆದರೂ ಉದ್ಯೋಗ ಸಿಗದಿರುವುದು ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಸಂತ್ರಸ್ತರಾದ ಸತ್ಯನಾರಾಯಣ ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿ: ಇಡೀ ರಾಜ್ಯಕ್ಕೆ ಬೆಳಕು ನೀಡೋ ಊರಲ್ಲೇ ಕತ್ತಲು: ಜೆಸ್ಕಾಂ ಕಣ್ಣಾಮುಚ್ಚಾಲೆಗೆ ಸಿಡಿದೆದ್ದ ರೈತರು
ವೈಟಿಪಿಎಸ್ ಆಡಳಿತ ಮಂಡಳಿ ತಮ್ಮ ಬೇಡಿಕೆಯನ್ನು ಈಡೇರಿಸಬೇಕು, ಉದ್ಯೋಗದ ವಿಚಾರದಲ್ಲಿ ವಿಧಿಸಿರುವ ಷರತ್ತನ್ನು ಮರುಪರಿಶೀಲಿಸಿ ಅರ್ಹ ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂಬುವುದು ಸಂತ್ರಸ್ತರ ಆಗ್ರಹ. ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭೂ ಸಂತ್ರಸ್ತ ಕುಟುಂಬಗಳು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




