Karnataka Rain: ಬೆಂಗಳೂರು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಗುರುವಾರವೂ ಸುರಿದ ಮಳೆ; ಕೆಲವರಲ್ಲಿ ಆತಂಕ, ಕೆಲವರಿಗೆ ಸಂತಸ

| Updated By: Digi Tech Desk

Updated on: May 20, 2021 | 8:48 PM

Bengaluru Rain Update: ಇಂದು ಕೂಡ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಯಶವಂತಪುರ, ಮಲ್ಲೇಶ್ವರಂ, ಶಿವಾಜಿನಗರ, ರೇಸ್​ಕೋರ್ಸ್ ರಸ್ತೆ ವಿಜಯನಗರ ಮತ್ತು ಶಾಂತಿನಗರ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.

Karnataka Rain: ಬೆಂಗಳೂರು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಗುರುವಾರವೂ ಸುರಿದ ಮಳೆ; ಕೆಲವರಲ್ಲಿ ಆತಂಕ, ಕೆಲವರಿಗೆ ಸಂತಸ
ಬೆಂಗಳೂರಿನಲ್ಲಿ ಇಂದೂ ಮಳೆ ಸುರಿಯಿತು
Follow us on

ಬೆಂಗಳೂರು: ಈಗಾಗಲೇ ಕೊವಿಡ್-19 ಎರಡನೇ ಅಲೆಯ ಹೊಡೆತದಿಂದ ತತ್ತರಿಸಿರುವ ಕರ್ನಾಟಕಕ್ಕೆ ಮಳೆರಾಯನ ಕಾಟ ಮತ್ತಷ್ಟು ದಿಗಿಲು ಹುಟ್ಟಿಸುತ್ತಿದೆ. ಕಳೆದೊಂದು ವಾರಕ್ಕಿಂತಲೂ ಹೆಚ್ಚಿನ ಸಮಯದಿಂದ ರಾಜ್ಯದ ಹಲವಾರು ಭಾಗಗಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಸಾಕು ಜನಜೀವನವೇ ಅಸ್ತವ್ಯಸ್ತಗೊಳ್ಳುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕೋವಿಡ್-19 ಸೋಂಕು ಜನರನ್ನು ಎಡೆಬಿಡದೆ ಪೀಡಿಸುತ್ತಿರುವ ಈಗಿನ ದಿನಗಳಲ್ಲಿ ಜನರು ಮಳೆಯಿಂದ ಇನ್ನಷ್ಟು ಆತಂಕಕ್ಕೊಳಗಾಗುತ್ತಿದ್ದಾರೆ. ನಗರದಲ್ಲಿ ಎಲ್ಲೆಡೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಹಲವಾರು ಕಡೆ ವೈಟ್ ಟಾಪಿಂಗ್ ಕೆಲಸ ಜಾರಿಯಲ್ಲಿದೆ. ಜಲಮಂಡಳಿಯವರು ಬೆಂಗಳೂರಿನ ರಸ್ತೆಗಳನ್ನು ಅಗೆದು ಬಿಟ್ಟಿದ್ದಾರೆ. ಪ್ರಸ್ತುತವಾಗಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಲಾಕ್​ಡೌನ್​ ಜಾರಿಯಲ್ಲಿದೆಯಾದರೂ ಪ್ರತಿನಿತ್ಯ ಸುರಿಯುತ್ತಿರುವ ಮಳೆ ಜನರಲ್ಲಿ ಭಯ ಹುಟ್ಟಿಸುತ್ತಿರುವುದಂತೂ ಸತ್ಯ.

ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಮನೆಯಲ್ಲಿ ಯಾರಾದರೂ ಅಸ್ವಸ್ಥರಾದಾಗ ಇಲ್ಲವೇ ಕೊವಿಡ್-19 ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಲೇಬೇಕಾದ ಜರೂರತ್ತು ಎದುರಾದಾಗ ಅಂಬ್ಯುಲೆನ್ಸ್​ಗಳನ್ನು ಪಡೆಯುವುದು ಮಳೆಯ ಹಿನ್ನೆಲೆಯಲ್ಲಿ ಮತ್ತಷ್ಟು ದುಸ್ತರವಾಗಲಿದೆ. ಮಳೆಯಿರದ ಸಂದರ್ಭಗಳಲ್ಲೇ ಅವರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇನ್ನು ಮಳೆ ಬಂತೆಂದರೆ ಹೇಳಿಕೊಳ್ಳಲು ಅವರಿಗೆ ಒಂದು ನೆಪ ಸಿಕ್ಕುಬಿಡುತ್ತದೆ.

ಮಾನವ ಆರೋಗ್ಯವಂತನಾಗಿದ್ದರೆ, ಮಳೆಗಾಳಿ ಅವನಲ್ಲಿ ಭಯ ಹುಟ್ಟಿಸುವುದಿಲ್ಲ. ಆದರೆ, ಕೋವಿಡ್ ಸೋಂಕು ತಾಂಡವ ನೃತ್ಯ ನಡೆಸುತ್ತಿರುವ ಇಂದಿನ ದಿನಗಳಲ್ಲಿ ಮಳೆ ಸುರಿಯುವುದನ್ನು ಬಹಳಷ್ಟು ಜನ ಆನಂದಿಸಲಾರರು. ಒಂದು ಅವ್ಯಕ್ತ ಭಯ ಅವರಲ್ಲಿ ಮನೆಮಾಡಿಕೊಳ್ಳುವಂಥ ಸ್ಥಿತಿಯನ್ನು ಮಳೆ ಸೃಷ್ಟಿಸಿಬಿಡುತ್ತದೆ. ಅದು ಸುರಿಯದಂತೆ ತಡೆಯುವುದು ನಮ್ಮ ಕೈಯಲ್ಲಿಲ್ಲ ಎನ್ನುವುದು ಕಟು ವಾಸ್ತವ.

ಇದು ವಿಷಯಾಂತರವಾಗುತ್ತಿದೆ. ಅಸಲಿಗೆ ವಿಷಯವೇನೆಂದರೆ ಇಂದು ಕೂಡ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಯಶವಂತಪುರ, ಮಲ್ಲೇಶ್ವರಂ, ಶಿವಾಜಿನಗರ, ರೇಸ್​ಕೋರ್ಸ್ ರಸ್ತೆ ವಿಜಯನಗರ ಮತ್ತು ಶಾಂತಿನಗರ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದೆ. ಕೇವಲ ದೇವನಹಳ್ಳಿ ಮಾತ್ರವಲ್ಲ ಅದರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲೂ ಜೋರು ಮಳೆಯಾಗಿದೆ. ಈ ಭಾಗಗಳ ರೈತರು ಹೇರಳವಾಗಿ ದ್ರಾಕ್ಷಿ ಬೆಳೆಯುತ್ತಾರೆ. ಆದರೆ, ಮಳೆಯಿಂದಾಗಿ ದ್ರಾಕ್ಷಿ ಬೆಳೆ ನೆಲಕ್ಕುರುಳುವ ಆತಂಕವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ, ಕೋಲಾರ ಜಿಲ್ಲೆಯ ರೈತರು ಮಳೆಯನ್ನು ಸ್ವಾಗತಿಸಿದ್ದಾರೆ. ಜಿಲ್ಲೆಯಾದ್ಯಂತ ಇಂದು ಭಾರಿ ಮಳೆಯಾಗಿದೆ. ಜಿಲ್ಲೆಯ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ಹಾಗೆ ನೋಡಿದರೆ, ನಾವೀಗ ಬೇಸಿಗೆಯ ಕೊನೆಹಂತದಲ್ಲಿದ್ದೇವೆ. ಮೇ ತಿಂಗಳು ಕಳೆದ ನಂತರ ಮುಂಗಾರು ಮಳೆ ಸರಿಯಲಾರಂಭಿಸುತ್ತದೆ. ರೈತರು ಬಿತ್ತನೆ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಈ ಸಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೋವಿಡ್-19 ಸೋಕಿನ ಅಬ್ಬರ ಕಡಿಮೆಯಾಗಿ ಮಳೆಯ ಅಬ್ಬರ ಹೆಚ್ಚಾದರೆ ಕೇವಲ ರೈತ ಮಾತ್ರವಲ್ಲ ಇಡೀ ನಾಡಿನ ಜನತೆ ಮುಂಗಾರು ಮಳೆಯನ್ನು ಆಹ್ಲಾದಿಸಲಿದ್ದಾರೆ. ಅದು ಹಾಗೆಯೇ ಅಗಲಿ…

ಇದನ್ನೂ ಓದಿ: Bengaluru Heavy Rains : ಬೆಂಗಳೂರಿನಲ್ಲಿ ಭಾರೀ ಮಳೆಗೆ ಓಕಳಿಪುರಂ ಅಂಡರ್‌ಪಾಸ್‌ ಜಲಾವೃತ.!

Published On - 8:21 pm, Thu, 20 May 21