ರಾಮನಗರ: ಜಿಲ್ಲೆಯಲ್ಲಿನ ಅಂಗನವಾಡಿಗಳನ್ನು ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ಪಂಚಾಯತಿ ತಂಡ ತೆಲಂಗಾಣದಲ್ಲಿ ಮೂರು ದಿನಗಳ ಕಾಲ ಅಧ್ಯಯನ ಪ್ರವಾಸ ಮಾಡಿದೆ. ಈ ಮೂಲಕ ಅಂಗನವಾಡಿಗಳನ್ನು ಮತ್ತಷ್ಟು ಹೈಟೆಕ್ಗೊಳಿಸಲು ರಾಮನಗರ ಜಿಲ್ಲಾ ಪಂಚಾಯತಿ ಮುಂದಾಗಿದೆ. ಜಿಲ್ಲಾ ಪಂಚಾಯತಿಯ ಸಿಇಒ ಇಕ್ರಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸೇರಿದಂತೆ ಇನ್ನಿತರ ಅಧಿಕಾರಿಗಳ ತಂಡ ಕಳೆದ ಶುಕ್ರವಾರದಿಂದ ಸೋಮವಾರದವರೆಗೆ ತೆಲಂಗಾಣ ರಾಜ್ಯದ ಸಂಗರೆಡ್ಡಿ ಜಿಲ್ಲೆಯಲ್ಲಿನ ಅಂಗನವಾಡಿಗಳ ಅಧ್ಯಯನ ನಡೆಸಿದ್ದಾರೆ. ಅಜೀಂ ಪ್ರೇಂ ಜೀ ಫೌಂಡೇಷನ್ನಲ್ಲಿ ನಡೆಸಿರುವ ಅಂಗನವಾಡಿಗಳ ಕಾರ್ಯತಂತ್ರದ ಬಗ್ಗೆ ಮೂರು ದಿನಗಳ ಪ್ರವಾಸದಲ್ಲಿ ಮಾಹಿತಿ ಪಡೆದಿರುವ ಅಧಿಕಾರಿಗಳು ಜಿಲ್ಲೆಯ ಅಂಗನವಾಡಿಗಳಲ್ಲಿ ಏನೆಲ್ಲ ಬದಲಾವಣೆ ತರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.
ಏಕೆ ಈ ಅಧ್ಯಯನ?
ರಾಮನಗರ ಜಿಲ್ಲಾ ಪಂಚಾಯತಿ ಈಗಾಗಲೇ ಟಯೋಟಾ ಕಂಪನಿಯ ಸಹಭಾಗಿತ್ವದಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನು ಸೃಜಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಹೀಗಾಗಿ ಮಾದರಿ ಅಂಗನವಾಡಿಗಳ ಅಧ್ಯಯನಕ್ಕಾಗಿ ಜಿಲ್ಲಾ ಪಂಚಾಯತಿ ತಂಡ ಮೂರು ದಿನಗಳ ಕಾಲ ತೆಲಂಗಾಣದಲ್ಲಿ ಅಧ್ಯಯನ ನಡೆಸಿದೆ. ಅಲ್ಲಿನ ಅಜೀಂ ಪ್ರೇಮ್ ಜಿ ಫೌಂಡೇಷನ್ ಅಂಗನವಾಡಿಗಳಿಗೆ ಬಾಲ್ಯ ಶಿಕ್ಷಣದ ಉಪಕ್ರಮವನ್ನು (Early Childhood Education) ಅಳವಡಿಸಿದೆ. ಹೀಗಾಗಿ ಶಾಲೆಯ ಮೆಟ್ಟಿಲು ಹತ್ತುವ ಮುನ್ನವೆ ಮಕ್ಕಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ತನ್ನ ಮೊದಲ ಅಧ್ಯಯನ ಪ್ರವಾಸ ಪೂರ್ಣಗೊಳಿಸಿದೆ.
ಫೌಂಡೇಷನ್ ಸಹಯೋಗ
ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್ ಜೀ ಫೌಂಡೇಷನ್ ಕಳೆದ 4 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿನ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಭೌತಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಫೌಂಡೇಷನ್ನ ನೆರವನ್ನು ಸಹ ಇಲಾಖೆ ಕೋರಿದೆ. ಈಗಾಗಲೇ ಸ್ನೇಹ ಎಂಬ ಎನ್ಜಿಓ ಮೂಲಕ ಜಿಲ್ಲಾ ಪಂಚಾಯತಿ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಟ್ರಸ್ಟ್ನೊಂದಿಗೆ ಅಧ್ಯಯನ ಪ್ರವಾಸ ನಡೆಸಿರುವುದು ವಿಶೇಷ.
ಅಂದಹಾಗೆ ರಾಮನಗರ ಜಿಲ್ಲೆಯಲ್ಲಿ ಒಟ್ಟು 1,543 ಅಂಗನವಾಡಿಗಳಿವೆ. ಇವುಗಳಲ್ಲಿ ಬಹುತೇಕ ಅಂಗನವಾಡಿಗಳ ಕಟ್ಟಡ ರಿಪೇರಿ ಕಾರ್ಯ, ಸುಣ್ಣ-ಬಣ್ಣ ಬಳಿಯುವುದು, ನೆಲದಲ್ಲಿಯು ಅಕ್ಷರ ಕಲಿಸುವ ಕಾರ್ಯಕ್ರಮಗಳು ಜಾರಿಯಲ್ಲಿವೆ. ಆದರೆ ಲಾಕ್ಡೌನ್ನಿಂದಾಗಿ ಅಂಗನವಾಡಿಗಳಿಗೆ ಮಕ್ಕಳು ಬರುವುದೇ ಸ್ಥಗಿತಗೊಂಡಿದೆ. ಹೀಗಾಗಿ ಖಾಲಿ ಇರುವ ಅಂಗನವಾಡಿಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸುವುದರೊಳಗಾಗಿ ಇನ್ನಷ್ಟು ಸುಧಾರಿತ ಯೋಜನೆಗಳು, ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಜಾರಿಗೆ ಬರಲಿವೆ ಎನ್ನಲಾಗುತ್ತಿದೆ.
ಎಲ್ಲರ ಸಹಕಾರವು ಬೇಕಿದೆ
ತೆಲಂಗಾಣದ ಮಾದರಿಯಲ್ಲಿಯೇ ರಾಜ್ಯದ ಗುಲ್ಬರ್ಗದಲ್ಲಿಯೂ ಕೆಲವು ಟ್ರಸ್ಟ್ಗಳು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿವೆ. ಶಾಲಾ ಪೂರ್ವದಲ್ಲಿಯೇ ಮಕ್ಕಳ ಮನಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಯೋಜನೆಗಳನ್ನು ಅಧ್ಯಯನ ನಡೆಸಲು ಜಿಲ್ಲಾ ಪಂಚಾಯತಿ ವಿಶೇಷ ಆಸಕ್ತಿ ವಹಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ 6 ಸೇವೆಗಳಲ್ಲಿ ಮಕ್ಕಳ ಭೌತಿಕ ಗುಣಮಟ್ಟ ಹೆಚ್ಚಿಸುವುದು ಪ್ರಮುಖವಾಗಿದೆ. ಹೀಗಾಗಿ ಎಲ್ಲ ಯೋಜನೆಗಳ ಅಧ್ಯಯನ ಬಳಿಕ ಜಿಲ್ಲೆಗೆ ಪೂರಕವಾದ ಅಂಶಗಳಿಗಾಗಿ ಎನ್ಜಿಓಗಳೊಂದಿಗೆ ಪ್ರೇಮ್ ಜೀ ಫೌಂಡೇಷನ್ನ ಸಹಕಾರವನ್ನು ಜಿಲ್ಲಾ ಪಂಚಾಯತಿ ಕೋರಲಿದೆ.
ತೆಲಂಗಾಣ ರಾಜ್ಯದಲ್ಲಿ ಮೂರು ದಿನಗಳ ಅಧ್ಯಯನ ಪ್ರವಾಸ ಪೂರ್ಣಗೊಳಿಸಲಾಗಿದೆ. ಅಲ್ಲಿ ಕೆಲ ಫೌಂಡೇಷನ್ಗಳು ಸಾಕಷ್ಟು ಉತ್ತಮ ಕೆಲಸವನ್ನು ಮಾಡಿದೆ. ಅವರಿಂದ ಮಾಹಿತಿ ಪಡೆಯುವುದು ಮಾತ್ರವಲ್ಲದೇ ಜಿಲ್ಲೆಯಲ್ಲಿನ ಅಂಗನವಾಡಿಗಳಿಗೂ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಇಕ್ರಮ್ ತಿಳಿಸಿದರು.
(ವರದಿ: ಪ್ರಶಾಂತ್ ಹುಲಿಕೆರೆ- 9980914134)
ಇದನ್ನೂ ಓದಿ
ಜಮೀರ್ ಅಹ್ಮದ್ ನಾನು 10 ಕೋಟಿ ಪಡೆದಿದ್ದು ಸಾಬೀತು ಮಾಡಲಿ- ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ
Published On - 6:47 pm, Thu, 8 April 21