ರಾಮನಗರ: ಮದುವೆ ಸಮಾರಂಭದಲ್ಲಿ ಐಸ್ಕ್ರೀಂ ಸೇವಿಸಿ 80 ಜನ ಅಸ್ವಸ್ಥ
ಮದುವೆ ಸಮಾರಂಭದಲ್ಲಿ ಐಸ್ಕ್ರೀಂ ಸೇವಿಸಿ 80 ಜನರು ಅಸ್ವಸ್ಥಗೊಂಡಿರುವ ಘಟನೆ ಚನ್ನಪಟ್ಟಣದ ಟಿಪ್ಪುನಗರದಲ್ಲಿ ನಡೆದಿದೆ. ಅಸ್ವಸ್ಥಗೊಂಡ 80 ಜನರಲ್ಲಿ 50 ಜನರನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ಜನರನ್ನು ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮನಗರ, ಮೇ 05: ಮದುವೆ ಸಮಾರಂಭದಲ್ಲಿ (Marriage) ಐಸ್ಕ್ರೀಂ (Ice Cream) ಸೇವಿಸಿ 80 ಜನರು ಅಸ್ವಸ್ಥಗೊಂಡಿರುವ ಘಟನೆ ಚನ್ನಪಟ್ಟಣದ (Channapattan) ಟಿಪ್ಪುನಗರದಲ್ಲಿ ನಡೆದಿದೆ. ಅಸ್ವಸ್ಥಗೊಂಡ 80 ಜನರಲ್ಲಿ 50 ಜನರನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ಜನರನ್ನು ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡವರಲ್ಲಿ ಬಹುತೇಕರು ಮಕ್ಕಳಿದ್ದಾರೆ. ಮದುವೆ ಸಮಾರಂಭದಲ್ಲಿ ಊಟದ ಬಳಿಕ ಐಸ್ಕ್ರೀಂ ತಿಂದು ತಮ್ಮ ಊರುಗಳಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ವಾಂತಿ, ಭೇದಿ ಶುರುವಾಗಿದೆ. ಸಮಾರಂಭದಲ್ಲಿ ಅವಧಿ ಮೀರಿದ ಐಸ್ಕ್ರೀಂ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಗಡಿಯ ವರ, ಚನ್ನಪಟ್ಟಣ ವಧು ನಡುವೆ ವಿವಾಹ ನಡೆದಿದೆ.
ಕೆರೆ ಮೀನು ತಿಂದು ಇಬ್ಬರ ಸಾವು
ಹಾಸನ: ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೆರೆ ಮೀನು ತಿಂದು ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಬಸವಹಳ್ಳಿ ಗ್ರಾಮದ ರವಿಕುಮಾರ್ (46), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈವಿಗಳು. ಅಸ್ವಸ್ಥರನ್ನು ಅರಕಲಗೂಡು ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಬೀಗರೂಟ ಮಾಡಿ 200ಕ್ಕೂ ಹೆಚ್ಚು ಜನ ಅಸ್ವಸ್ಥ, ವೆಜ್ ಸೇವಿಸಿ ಸಚಿವ ಬಚಾವ್
ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲಿಸಿದ್ದರು. ಬಸವನಹಳ್ಳಿ ಗ್ರಾಮದ ಕೆರೆ ನೀರಿಲ್ಲದೆ ಬತ್ತಿ ಹೋಗಿದೆ. ಖಾಲಿಯಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನುಗಳನ್ನ ಹಿಡಿದ್ದರು. ಬಳಿಕ ಮೀನು ಅಡುಗೆ ಮಾಡಿ ಊಟ ಮಾಡಿದ್ದರು. ಬಳಿಕ ವಾಂತಿ, ಭೇದಿಯಿಂದ ಬಳಲಿ 15ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಇಬ್ಬರು ಮೃತಪಟ್ಟಿದ್ದಾರೆ. ಮೃತ ಪುಟ್ಟಮ್ಮ ಬಸವನಹಳ್ಳಿ ಗ್ರಾಮದಲ್ಲಿರುವ ತವರು ಮನೆಗೆ ಬಂದಿದ್ದರು. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:13 pm, Sun, 5 May 24