ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಗ್ರಾಮದ ಮಕ್ಕಳ ದೇವರ ಮಠದ ಜಮೀನಿನಲ್ಲಿ ಪ್ರಾಚೀನ ಕಾಲದ ವಸ್ತುಗಳು ಪತ್ತೆಯಾಗಿವೆ. ಜಮೀನಿನಲ್ಲಿ ಇದ್ದ ತೆಂಗಿನ ಸಸಿಗಳಿಗೆ ನೀರಾವರಿ ಪೈಪ್ ಗಳನ್ನ ಅಳವಡಿಸಲು ಜೆಸಿಬಿ ಮೂಲಕ ಜಮೀನಿನಲ್ಲಿ ಗುಂಡಿ ತೆಗೆಯುತ್ತಿದ್ದ ವೇಳೆ ಇದ್ದಕಿದ್ದಂತೆ ಭೂಮಿ ಕುಸಿದಿದೆ. ಹತ್ತು ಆಡಿ ಆಳಕ್ಕೆ ಗುಂಡಿ ಕಂಡು ಬಂದಿದೆ. ಆ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಹಿತ್ತಳೆ, ತಾಮ್ರ ಹಾಗೂ ಮಣ್ಣಿನ ವಸ್ತುಗಳು ಪತ್ತೆಯಾಗಿವೆ. ಅವುಗಳಲ್ಲಿ ತಟ್ಟೆ, ದೀಪಸ್ತಂಭ, ವಿಭೂತಿ ಗಟ್ಟಿ, ಉಯ್ಯಾಲೆ ಕಂಬ, ಜಾಗಟೆ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿದ್ದು ಇದು ಎಲ್ಲರ ಕೂತುಹಲಕ್ಕೂ ಕಾರಣವಾಗಿದೆ.
ಇನ್ನು ಶ್ರೀಮಠದ ಸ್ವಾಮೀಜಿಯೊಬ್ಬರು ಲೋಕಕಲ್ಯಾಣಕ್ಕಾಗಿ ತಪಗೈದು ಜೀವಂತ ಸಮಾಧಿಯಾಗಿರಬಹುದು. ಈ ವೇಳೆ ಈ ವಸ್ತುಗಳನ್ನ ಬಳಸಿರಬಹುದು ಎಂಬ ಮಾಹಿತಿ ಇದ್ದು ಮಠದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ. ಶ್ರೀ ಮಠ ಪುರಾತನ ಮಠವಾಗಿದ್ದು ನೂರಾರು ವರ್ಷಗಳ ಇತಿಹಾಸವಿದೆ. ಮಠದ ಜಮೀನಿನಲ್ಲಿ ಸಿಕ್ಕಿರುವ ವಸ್ತುಗಳ ಮೇಲೆ ಹಳೆಗನ್ನಡದಲ್ಲಿ ಹೆಸರು ಸಹಾ ಬರೆಯಲಾಗಿದೆ.
ಮಠದ ಜಮೀನಿನಲ್ಲಿ ಪ್ರಾಚೀನ ಕಾಲದ ವಸ್ತುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಠದ ಮೃತ್ಯುಂಜಯ ಸ್ವಾಮೀಜಿಯವರಿಗೂ ಸೂಚನೆ ನೀಡಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವವರೂ ಯಾವುದೇ ವಸ್ತಗಳನ್ನ ಬಳಕೆ ಹಾಗೂ ಹಾಳು ಮಾಡದಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ