Breaking News: ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ: ಹನಿಟ್ರ್ಯಾಪ್ ಬಲೆ ಬೀಸಿದ್ದ ಯುವತಿಯೊಂದಿಗೆ ಕಣ್ಣೂರು ಮಠದ ಸ್ವಾಮೀಜಿ, ವಕೀಲ ಬಂಧನ
ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಅಣ್ಣತಮ್ಮಂದಿರು.
ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನಿಟ್ರ್ಯಾಪ್ ಬಲೆ ಬೀಸಿದ್ದ ಆರೋಪಿ ಯುವತಿಯನ್ನು ಬಂಧಿಸಿದ್ದಾರೆ. ಈಕೆಯ ಹೆಸರು ನೀಲಾಂಬಿಕೆ ಅಲಿಯಾಸ್ ಚಂದು ಎಂದು ಹೆಸರಿಸಲಾಗಿದ್ದು, ಈಕೆಯು ದೊಡ್ಡಬಳ್ಳಾಪುರ ಮೂಲದವಳು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಹೇಳಿದ್ದಾರೆ. ಆರೋಪಿ ಯುವತಿ ನಿಲಾಂಬಿಕೆಯೇ ವೀಡಿಯೋ ಮಾಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಅಣ್ಣತಮ್ಮಂದಿರು. ಎರಡೂ ಮಠಗಳ ನಡುವೆ ಆಸ್ತಿ ವಿವಾದ ಇತ್ತು. ಈ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸಹ ಇದೇ ಮಾತು ಹೇಳಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿ (A1) ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, 2ನೇ ಆರೋಪಿಯಾಗಿ ನಿಲಾಂಬಿಕೆ ಅಲಿಯಾಸ್ ಚಂದರು ಹಾಗೂ 3ನೇ ಆರೋಪಿಯಾಗಿ ಕಣ್ಣೂರು ಮಠದ ವಕೀಲ ಮಹದೇವಯ್ಯ ಅವರನ್ನು ಹೆಸರಿಸಲಾಗಿದೆ. ಆಕ್ಷೇಪಾರ್ಯ ವಿಡಿಯೊವನ್ನು ಫೆಬ್ರುವರಿ ಅಥವಾ ಏಪ್ರಿಲ್ನಲ್ಲಿ ರೆಕಾರ್ಡ್ ಮಾಡಿರಬಹುದು ಎಂದು ಶಂಕಿಸಲಾಗಿದೆ. 3ನೇ ಆರೋಪಿ ಮಹದೇವಯ್ಯ ವಕೀಲರಷ್ಟೇ ಅಲ್ಲದೇ, ನಿವೃತ್ತ ಶಿಕ್ಷಕರೂ ಆಗಿದ್ದರು. ಆರೋಪಿಗಳ ಸುದೀರ್ಘ ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಜನರ ಹೆಸರು ಹಾಗೂ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಇದೀಗ ಬಂಧನದಲ್ಲಿರುವ ಆರೋಪಿ ಡಾ ಮೃತ್ಯುಂಜಯ ಸ್ವಾಮೀಜಿ ಅವರು ಬಸವಲಿಂಗ ಸ್ವಾಮೀಜಿಯ ಸೋದರ ಸಂಬಂಧಿಯಾಗಬೇಕಿದೆ.
ದೊಡ್ಡಬಳ್ಳಾಪುರ ಮೂಲದ ಯುವತಿಯ ಅಜ್ಜಿ ಮನೆಯು ತುಮಕೂರು ಕ್ಯಾತ್ಸಂದ್ರದಲ್ಲಿ ಇತ್ತು. ಸಿದ್ದಗಂಗಾ ಮಠಕ್ಕೆ ಸಮೀಪವಿದ್ದ ಈ ಮನೆಗೆ ಆಗಾಗ ಬರುತ್ತಿದ್ದ ಯುವತಿಗೆ ಹಲವು ಸ್ವಾಮೀಜಿಗಳ ಪರಿಚಯವಿತ್ತು. ಒಮ್ಮೆ ಯಾರೋ ಬೇರೆ ಸ್ವಾಮೀಜಿ ಬಗ್ಗೆ ಯುವತಿಯು ಹಗುರವಾಗಿ ಮಾತನಾಡಿದ್ದನ್ನು ಬಂಡೇ ಮಠದ ಸ್ವಾಮೀಜಿ ಗಮನಿಸಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ಪರಸ್ಪರ ಫೋನ್ನಲ್ಲಿಯೂ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ್ದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಹಾಗೂ ವಕೀಲ ಮಹದೇವಯ್ಯ ಹನಿಟ್ರ್ಯಾಪ್ ಬಲೆಗೆ ಸಿಲುಕಿಸಲು ಪ್ಲಾನ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ತೀವ್ರಗೊಂಡ ಹುಡುಕಾಟ
ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವ ಪಡೆದುಕೊಳ್ಳುತ್ತಿದೆ. ಸ್ವಾಮೀಜಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪ ಹೊತ್ತಿರುವ ಗುಂಪು ದಿನಕ್ಕೊಂದು ವಿಡಿಯೊ ಬಿಡುಗಡೆ ಮಾಡುತ್ತಿದೆ. ಈವರೆಗೆ ಒಟ್ಟು ಮೂರು ಇಂಥ ವಿಡಿಯೊಗಳು ಬಿಡುಗಡೆಯಾಗಿದ್ದು, ಹನಿಟ್ರ್ಯಾಪ್ ಮಾಡಿದ್ದ ಯುವತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಪ್ರಕರಣದ ತನಿಖೆಗಾಗಿ ರಾಮನಗರ ಜಿಲ್ಲಾ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿಕೊಂಡಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಬಸವಲಿಂಗ ಸ್ವಾಮೀಜಿ ಮೊಬೈಲ್ನಲ್ಲಿ ದಾಖಲಾಗಿರುವ ಮೊಬೈಲ್ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ಹನಿಟ್ರ್ಯಾಪ್ ಮಾಡಿರುವ ಯುವತಿಯನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದರೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿವರಗಳು ಬಯಲಾಗಲಿವೆ. ತಂಡವೇ ಪತ್ತೆಯಾದರೆ ನಿಜವಾದ ಬ್ಲ್ಯಾಕ್ಮೇಲ್ನ ನಿಜವಾದ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅನುಮಾನ ಬಂದ ಹಲವರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ.
ಸ್ವಾಮೀಜಿ ನಾಪತ್ತೆ
ಈ ನಡುವೆ ಬಸವಲಿಂಗ ಸ್ವಾಮೀಜಿ ತಮ್ಮ ಡೆತ್ನೋಟ್ನಲ್ಲಿ ಪ್ರಸ್ತಾಪಿಸಿದ್ದ ಸ್ವಾಮೀಜಿಯೊಬ್ಬರು ನಾಪತ್ತೆಯಾಗಿರುವುದು ಹಲವರ ಹುಬ್ಬೇರಿಸಿದೆ. ಆರೋಪಿ ಸ್ವಾಮೀಜಿ ತಮ್ಮ ಮಠದಿಂದ ನಾಪತ್ತೆಯಾಗಿದ್ದು, ಬಂಧನ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳದಿಂದಲೇ ಅವರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸರ ವಶದಲ್ಲಿರುವ ಕಣ್ಣೂರು ಮಠದ ಸ್ವಾಮೀಜಿ ಹಾಗೂ ಬಂಡೇಮಠದ ಸ್ವಾಮೀಜಿ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ಸ್ವಾಮೀಜಿ ಒಬ್ಬರೇನಾ ಎನ್ನುವ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ.
ಮತ್ತೊಂದು ವಿಡಿಯೊ ಬಿಡುಗಡೆ
ಆತ್ಮಹತ್ಯೆ ಮಾಡಿಕೊಂಡಿರುವ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಮತ್ತೊಂದು ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಸ್ವಾಮೀಜಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಬಿಡುಗಡೆಯಾಗಿದ್ದ ವಿಡಿಯೊದಲ್ಲಿ ಸ್ವಾಮೀಜಿಯನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ಯುವತಿಯ ಚಿತ್ರ ಬಹಿರಂಗಗೊಂಡಿತ್ತು.
Published On - 1:12 pm, Sun, 30 October 22