ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರಿಂದ ನಿಯಮ ಉಲ್ಲಂಘನೆ!

| Updated By: ಗಣಪತಿ ಶರ್ಮ

Updated on: Sep 03, 2024 | 10:51 AM

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇಯಲ್ಲಿ ಅತಿ ವೇಗದ ಚಾಲನೆ ಮಾಡಿದವರ ವಿರುದ್ಧ ಎಫ್​ಐಆರ್​ ದಾಖಲಿಸುವುದು, ಗಂಟೆಗೆ 100 ಕಿಲೋಮೀಟರ್​​ಗಿಂತ ವೇಗದಲ್ಲಿ ವಾಹನ ಚಲಾಯಿಸಿದರೆ ದಂಡ ವಿಧಿಸುವುದು ಎಲ್ಲರಿಗೂ ತಿಳಿದಿದೆ. ಆದರೆ, ಹೆದ್ದಾರಿಯಲ್ಲಿ ಕ್ಯಾಮರಾಗಳು ಇಲ್ಲದ ಜಾಗಗಳಲ್ಲಿಯೂ ಅತಿವೇಗದಿಂದ ಚಾಲನೆ ಮಾಡಿದರೆ ದಂಡ ಬೀಳುವುದು ಗ್ಯಾರಂಟಿ ಎಂದಿದ್ದಾರೆ ಪೊಲೀಸರು. ಅರೆ, ಅದ್ಹೇಗೆ ಅದನ್ನು ಪತ್ತೆ ಮಾಡ್ತಾರೆ ಎನ್ನುತ್ತೀರಾ? ಇಲ್ಲಿದೆ ಮಾಹಿತಿ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರಿಂದ ನಿಯಮ ಉಲ್ಲಂಘನೆ!
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇಯಲ್ಲಿ ವೇಗದ ಮಿತಿ ತಪಾಸಣೆಗೆ ಸಾಧನ ಅಳವಡಿಕೆ ಮಾಡಿರುವುದು
Follow us on

ರಾಮನಗರ, ಸೆಪ್ಟೆಂಬರ್ 3: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಸಂಚಾರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ವೇಗದ ಮಿತಿಯನ್ನೂ ನಿಗದಿಪಡಿಸಿದೆ. ಇಷ್ಟೆಲ್ಲ ಆದಮೇಲೂ ಸಂಚಾರ ನಿಯಮಗಳ ಉಲ್ಲಘನೆಯಾಗುತ್ತಿರುವುದನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ಕ್ಯಾಮರಾಗಳು, ಸೆನ್ಸರ್​ಗಳನ್ನು ಅಳವಡಿಸಲಾಗಿದೆ. ಆದಾಗ್ಯೂ, ಕಳೆದ ಕೆಲವೇ ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಗಂಟೆಗೆ 130 ಕಿಲೋಮೀಟರ್​ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗುತ್ತದೆ. ವಾಹನ ಸೀಜ್ ಮಾಡಿ, ಲೈಸೆನ್ಸ್ ಕೂಡ ಅಮಾನತಿನಲ್ಲಿಡಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಈವರೆಗೆ 193‌‌ ವಾಹನ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಎರಡು ಲಕ್ಷಕ್ಕೂ ಅಧಿಕ ವಾಹನ ಸವಾರರು ನಿಯಮ ಮೀರಿದ್ದಾರೆ. ಐಟಿಎಮ್ಎಸ್ ಕ್ಯಾಮರಾದಿಂದ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. 9 ರೀತಿಯ ನಿಮಯಗಳು ಇದರಲ್ಲಿ ಡಿಟೆಕ್ಟ್ ಆಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ಯಾಮರಾ ಇಲ್ಲದ ಜಾಗದಲ್ಲಿ ವೇಗವಾಗಿ ಹೋದರೂ ಬೀಳುತ್ತೆ ಫೈನ್!

ನೂರಕ್ಕಿಂತ ಹೆಚ್ಚು ವೇಗದಲ್ಲಿ ಹೋದರೆ ಐಟಿಎಮ್ಎಸ್ ಕ್ಯಾಮರಾ ಪತ್ತೆ ಮಾಡಿ ಮಾಹಿತಿ ಕಳುಹಿಸುತ್ತದೆ. ಅಂಥವರಿಗೆ ಫೈನ್ ಬೀಳಲಿದೆ. ಎಐ ಕ್ಯಾಮೆರಾ ಪೋಲ್ ಬಳಿ ಮಾತ್ರವಷ್ಟೇ ಅಲ್ಲ, ಕ್ಯಾಮೆರಾ ಇಲ್ಲದ ಜಾಗದಲ್ಲಿ ವೇಗವಾಗಿ ಹೋದರೂ ಗೊತ್ತಾಗುತ್ತದೆ. ಎರಡು ಕ್ಯಾಮರಾಗಳ ಮಧ್ಯೆ ಇಂತಿಷ್ಟೇ ವೇಗದ ಮಿತಿ ಹಾಗೂ ಸಮಯ ಫಿಕ್ಸ್ ಆಗಿರುತ್ತದೆ. ನೂರಕ್ಕಿಂತ ಹೆಚ್ಚು ವೇಗ ತೆರಳಿದರೆ, ಸಮಯಕ್ಕಿಂತ‌ ಮುಂಚೆ ಕ್ಯಾಮರಾ ಪೋಲ್ ಬಂದ್ರೆ ದಂಡ ವಿಧಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಟ್ಯಾಕ್ಸಿಗಳಿಗೆ ಒಂದು ನಗರ ಒಂದು ದರ ಜಾರಿ, ಈಗೆಷ್ಟಿದೆ ಬಾಡಿಗೆ? ಇಲ್ಲಿದೆ ವಿವರ

ಆರು ಸಾವಿರ ಜನರಿಗೆ ಈಗಾಗಲೇ ದಂಡದ ಸಂದೇಶ ಕಳುಹಿಸಲಾಗಿದೆ. ಉಳಿದ ವಾಹನಸವಾರರಿಗೂ ದಂಡ ಪಾವತಿಸುವಂಯೆ ನೊಟೀಸ್ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಪೊಲೀಸ್ ಇಲ್ಲ, ಕ್ಯಾಮರಾ ಇಲ್ಲ ಅಂತ ವೇಗವಾಗಿ ಹೋಗಬೇಡಿ. ಇಡೀ ಹೆದ್ದಾರಿಯಲ್ಲಿ ಐಟಿಎಮ್ಎಸ್ ಕ್ಯಾಮರಾ ನಿಗಾ ಇದೆ ಎಂದು ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ