
ರಾಮನಗರ, ಜುಲೈ 31: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ (Bengaluru Mysuru Expressway) ಹೊಸ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತೆರೆಯುವುದರೊಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳಿಗಾಗಿ ಕೇಂದ್ರ ಸರ್ಕಾರ 712 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸುಮಾರು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 118 ಕಿ.ಮೀ ಉದ್ದದ 6 ಪಥದ ಎಕ್ಸ್‌ಪ್ರೆಸ್ ವೇನಲ್ಲಿ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯವಾಗಿತ್ತು. 3 ವರ್ಷಗಳ ಹಿಂದೆಯೇ ಲೋಕಾರ್ಪಣೆಗೊಂಡ ಈ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳೇ ಇರಲಿಲ್ಲ ಎಂಬ ಆರೋಪಗಳಿದ್ದವು. ಬಸ್ ಶೆಲ್ಟರ್, ಮೇಲ್ಸೇತುವೆ, 2 ಕಡೆಗಳಲ್ಲಿ ಸರ್ವೀಸ್ ರಸ್ತೆ ಕಡಿತ, ಹೀಗೆ ಅನೇಕ ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕಾಮಗಾರಿಗಳಿಗಾಗಿ ಕೇಂದ್ರ 712 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಕಾರವು 2 ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಇನ್ನು ಹೆದ್ದಾರಿಯ ಬದಿಯಲ್ಲಿ ಒಟ್ಟು 22 ಕಿ.ಮೀನಷ್ಟು ದೂರದ ನೂತನ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಓವರ್‌ಬೈಪಾಸ್, ಅಂಡರ್ ಬ್ರಿಡ್ಜ್‌ನೊಂದಿಗೆ ಒಟ್ಟು 14 ಕಡೆಗಳಲ್ಲಿ ಹೆದ್ದಾರಿಗೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ತಲೆ ಎತ್ತಲಿವೆ.
ಅಂದಹಾಗೆ, 3 ವರ್ಷಗಳ ಹಿಂದೆಯೇ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ಬಿಡದಿ ಹಾಗೂ ಮಂಡ್ಯದ ಬಳಿ ಸರ್ವೀಸ್ ರಸ್ತೆಗಳ ಕಾಮಗಾರಿ ನಡೆದಿರಲಿಲ್ಲ. ಹೆದ್ದಾರಿಗೆ ಎಂಟ್ರಿ-ಎಕ್ಸಿಟ್ ಪಡೆಯುವ ಜಾಗಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳಿದ್ದವು. ಎಂಟ್ರಿ-ಎಕ್ಸಿಟ್ ಸ್ಥಳಗಳಲ್ಲಿಯೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು. ಅಲ್ಲದೆ ಎಂಟ್ರಿ-ಎಕ್ಸಿಟ್ ಸ್ಥಳಗಳನ್ನು ಹೆಚ್ಚಿಸುವ ಬೇಡಿಕೆಗಳು ಇದ್ದವು. ಹೆದ್ದಾರಿ ದಾಟಲು ಅಂಡರ್‌ಪಾಸ್, ಪ್ಲೈಓವರ್‌ಗಳ ಕೊರತೆಯೂ ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ಮಾತ್ರವಲ್ಲದೇ, ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೇಗಳಿಂದಲೂ ತಿಳಿದು ಬಂದಿತ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಯಾಣಿಸಿದ ದೂರಕ್ಕಷ್ಟೆ ಟೋಲ್ ಪಾವತಿಸುವ ವ್ಯವಸ್ಥೆಯೇ ಇಲ್ಲಿರಲಿಲ್ಲ. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾಗಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ: ಏನಿದರ ವಿಶೇಷ? ಇಲ್ಲಿದೆ ವಿವರ
ಒಟ್ಟಾರೆಯಾಗಿ ಸಾಕಷ್ಟು ಅಪಖ್ಯಾತಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಗೆ ಈಗ ಮರುಜೀವ ತುಂಬಲಾಗುತ್ತಿದ್ದು, ವಾಹನ ಸವಾರರ ಸಂತಸಕ್ಕೆ ಕಾರಣವಾಗಿದೆ.