ರಾಮನಗರ, ನ.10: ಬಿಡದಿಯನ್ನು ಗ್ರೇಟರ್ ಬೆಂಗಳೂರು ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ‘ರಾಮನಗರ(Ramanagara)ವನ್ನು ಬೆಂಗಳೂರು ಬದಲು ಡೆಲ್ಲಿಯೆಂದು ಹೆಸರಿಡಿ, ಯಾರು ಬೇಡ ಅಂದವರು, ಆಗ ಇನ್ನೂ ವಿಶ್ವಮಟ್ಟದಲ್ಲಿ ಹೆಸರಾಗುತ್ತಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಟಾಂಗ್ ಕೊಟ್ಟಿದ್ದಾರೆ.
ಇಂದು(ನ.10) ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ‘ಸ್ವಲ್ಪ ಮಳೆ ಆದಾಗ ನೋಡಿದ್ದೀರಲ್ಲ, ಎಂತಹ ಗ್ರೇಟರ್ ಬೆಂಗಳೂರು ಮಾಡಿದ್ದಾರೆಂದು. ಸಹಕಾರನಗರದಲ್ಲಿ ನೀರು ನುಗ್ಗಿದ್ದಕ್ಕೆ ಅಂಗಡಿ ಮಾಲೀಕರು, ಸ್ಥಳೀಯರು ಸೇರಿ ಸಚಿವರಿಗೆ ಏರು ಧ್ವನಿಯಲ್ಲೇ ಮಾತಾಡಲಿಲ್ಲವಾ, ಆಗ ನಾನೇನು ಮಾಡುವುದಕ್ಕೆ ಆಗುತ್ತೆ ಎಂದು ಸಚಿವರು ಉತ್ತರ ಕೊಟ್ಟಿದ್ದಾರೆ. ಹೆಸರು ಬದಲಾವಣೆ ಮಾಡುವುದರಿಂದ ಏನೂ ಬದಲಾಗಲ್ಲ ಎಂದರು.
ಇದನ್ನೂ ಓದಿ:ರೈತರು, ಕಾರ್ಮಿಕರ ಹಿತಾಸಕ್ತಿಗಾಗಿ ಬಿಡದಿವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆ: ಡಿಕೆ ಶಿವಕುಮಾರ್
ಬಿಡದಿ ಭಾಗದಲ್ಲಿ ಲಕ್ಷಾಂತರ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆ ಬಿಡದಿ ಭಾಗಕ್ಕೆ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಹೌದು, ಬಿಡದಿವರೆಗೂ ಮೆಟ್ರೋ ವಿಸ್ತರಿಸಲು ಯೋಚಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಬಿಡದಿಯಲ್ಲಿ ನಡೆದ ಟೊಯೋಟಾ ತರಬೇತಿ ಕೇಂದ್ರ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ‘ನಾನು ಬರೀ ಉದ್ಘಾಟನೆ ಮಾಡಲಿಕ್ಕೆ ಬಂದಿಲ್ಲ. ಬಿಡದಿಗೆ ಗಿಫ್ಟ್ ಕೊಡುವ ಆಸೆಯಿಂದ ಈ ಭಾಗಕ್ಕೂ ಮೆಟ್ರೋ ತರಲು ಪ್ರಯತ್ನ ಮಾಡುತ್ತೇನೆ. ಇದಕ್ಕೆ ಸಂಬಂಧಿಸಿದ ಲೀಗಲ್ ಪ್ರೊಸಿಜರ್ ಎಲ್ಲವೂ ಆಗುತ್ತೆ. ಬೆಂಗಳೂರಿಗೆ ಶಕ್ತಿ ತುಂಬವ ನಿಟ್ಟಿನಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Fri, 10 November 23