71 ವಯಸ್ಸಾದ್ರೂ ಬುದ್ಧಿ ಇಲ್ಲ: ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಹಣ ಪೀಕಿದ ವೃದ್ಧ

ಆತ ವಯೋವೃದ್ಧ, ಇಳಿ ವಯಸ್ಸಿನಲ್ಲಿ ನೆಮ್ಮದಿ ಜೀವನ ನಡೆಸುವುದನ್ನು ಬಿಟ್ಟು ಹಣದಾಸೆಗೆ ಅಡ್ಡ ಮಾರ್ಗ ಹಿಡಿದಿದ್ದನು. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕಂಡ ಕಂಡವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ. ಇದೀಗ ಕೆಲಸನೂ ಇಲ್ಲದೇ, ಕೊಟ್ಟ ಹಣವೂ ವಾಪಸ್​ ಬಾರದೆ ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

71 ವಯಸ್ಸಾದ್ರೂ ಬುದ್ಧಿ ಇಲ್ಲ: ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಹಣ ಪೀಕಿದ ವೃದ್ಧ
ಆರೋಪಿ ಶಿವಕುಮಾರ್
Edited By:

Updated on: Aug 18, 2025 | 9:06 PM

ಬೆಂಗಳೂರು ದಕ್ಷಿಣ, ಆಗಸ್ಟ್​ 18: ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಕೊಡಿಸುವುದಾಗಿ ನಂಬಿಸಿ ಓರ್ವ ವೃದ್ಧ (Elderly) ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ (Fraud). ನಿವೃತ್ತ ಲೋಕೋ ಪೈಲಟ್​ ಶಿವಕುಮಾರ್ (71 ವರ್ಷ) ವಂಚಿಸಿದ ಆರೋಪಿ. ಶಿವಕುಮಾರ್ ರಾಮನಗರದ ಮಂಜುನಾಥನಗರದ ನಿವಾಸಿಯಾಗಿದ್ದಾನೆ. ಶಿವಕುಮಾರ್ ತನ್ನ ಬಣ್ಣದ ಮಾತುಗಳ ಮೂಲಕ ಜನರನ್ನು ಬುಟ್ಟಿಗೆ ಬೀಳಿಸಿಕೊಂಡು ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ.

ಈತ “ರೈಲ್ವೆ ಇಲಾಖೆಯಲ್ಲಿ ಮೇಲಾಧಿಕಾರಿಗಳಿಂದ ಹಿಡಿದು ಕೆಳದರ್ಜೆಯ ಸಿಬ್ಬಂದಿವರೆಗೆ ನನಗೆ ಪರಿಚಯ ಇದ್ದಾರೆ. ಪ್ರತಿವರ್ಷ ತನಗೆ ಓರ್ವ ಹುಡುಗನ್ನು ಇಲಾಖೆ ಒಳಗೆ ಸೇರಿಸಲು ಕೋಟಾ ಇರುತ್ತದೆ. ನಿಮ್ಮ ಮಕ್ಕಳನ್ನು ಕೂಡ ರೈಲ್ವೆ ಇಲಾಖೆಯಲ್ಲಿ ಸೇರಿಸುತ್ತೇನೆ” ಎಂದು ಹೇಳಿ ಹಣ ಪಡೆದು ವಂಚಿಸಿದ್ದಾನೆ.

ಆರೋಪಿ ಶಿವಕುಮಾರ ರಾಮನಗರದ ಸಾವಿತ್ರಮ್ಮ ಎಂಬುವರ ಬಳಿ 8.65 ಲಕ್ಷ ನಗದು, 3 ಲಕ್ಷ ಮೌಲ್ಯದ 59 ಗ್ರಾಮ ಚಿನ್ನಭರಣ ಪಡೆದಿದ್ದಾನೆ. ಬಳಿಕ, ಶಿವಣ್ಣ ಎಂಬುವರಿಂದ 4 ಲಕ್ಷ 50 ಸಾವಿರ ರೂ. ಹಣ ಪಡೆದಿದ್ದಾನೆ. ನಂತರ, ಇವರಿಗೆಲ್ಲ ರೈಲ್ವೆ ಇಲಾಖೆಯ ನಕಲಿ ಸೀಲ್ ಹಾಗೂ ಸೈನ್ ಮಾಡಿ office person department southwest railway, keshavapura post, gadag road, hubli-23 ಯಿಂದ ಪೋಸ್ಟ್ ಮಾಡಿದ್ದಾನೆ.

ಈ ಪೋಸ್ಟ್​ ಸಾವಿತ್ರಮ್ಮ ಮತ್ತು ಶಿವಣ್ಣ ಅವರ ಮನೆಗೆ ತಲುಪಿದೆ. ಸಾವಿತ್ರಮ್ಮ ಮತ್ತು ಶಿವಣ್ಣ ಪೋಸ್ಟ್​ ಬಂದಿರುವ ಬಗ್ಗೆ ಆರೋಪಿ ಶಿವಕುಮಾರ್​ಗೆ ತಿಳಿಸಿದ್ದಾರೆ. ಆಗ, ಆರೋಪಿ ಶಿವಕುಮಾರ್ ಇನ್ನೂ 2 ತಿಂಗಳಲ್ಲಿ ಆರ್ಡರ್​ ಕಾಪಿ ಬರುತ್ತದೆ ಎಂದು ಹೇಳಿದ್ದಾನೆ. 2 ತಿಂಗಳು ಕಳೆದರೂ ಆರ್ಡರ್​ ಕಾಪಿ ಬಾರದೆ ಇದ್ದಾಗ, ಸಾವಿತ್ರಮ್ಮ ಮತ್ತು ಶಿವಣ್ಣ ಮತ್ತೆ ಶಿವಕುಮಾರ್​ಗೆ ಕರೆ ಮಾಡಿದ್ದಾರೆ. ಈ ವೇಳೆ ಶಿವಕುಮಾರ್ ಕರೆ ಸ್ವೀಕರಿಸಿಲ್ಲ, ಭೇಟಿಯೂ ಆಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಶಿವಕುಮಾರ್​ಗೆ ಹಣ ನೀಡಿ ಮೋಸ ಹೋಗಿದ್ದಾರೆ. ಬಳಿಕ, ಸಾವಿತ್ರಮ್ಮ ಮತ್ತು ಶಿವಣ್ಣ ರಾಮನಗರ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಹೆಸರಿನಲ್ಲಿ ನಿವೃತ್ತ ವಿಜ್ಞಾನಿಗೆ ಲಕ್ಷಾಂತರ ರೂ. ವಂಚನೆ

ಆರೋಪಿ ಶಿವಕುಮಾರ್ ವಿರುದ್ಧ ಬಿಎನ್​ಸ್​ ಕಾಯ್ದೆ ಕಲಂ 179, 180, 204, 318 (4), 316 (2), 335, 336 (1), 336 (2), 336 (3) ಜೊತೆಗೆ 3 (5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕೇವಲ ರಾಮನಗರ ಜಿಲ್ಲೆ ಮಾತ್ರವಲ್ಲದೇ ಬೇರೆ ಜಿಲ್ಲೆಗಳಲ್ಲೂ ಆರೋಪಿ ಶಿವಕುಮಾರ್ ತನ್ನ ಕರಾಮತ್ತನ್ನು ತೋರಿಸಿದ್ದಾನೆ ಎನ್ನಲಾಗಿದೆ. ಒಟ್ಟಾರೆಯಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ದೋಖಾ ಮಾಡಿದ್ದು, ಪೊಲೀಸರ ತನಿಖೆಯಿಂದ ಮತ್ತಷ್ಟು ಸತ್ಯಾಸತ್ಯತೆ ಹೊರಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Mon, 18 August 25