ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಇಂದು (ಫೆಬ್ರವರಿ 28) FIR ದಾಖಲು ಮಾಡಲಾಗಿದೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎ2 ವಿಪಕ್ಷ ನಾಯಕ ಸಿದ್ದರಾಮಯ್ಯ, ಎ3 ಡಿ.ಕೆ. ಸುರೇಶ್, ಎ4 ಎಂಎಲ್‌ಸಿ ಎಸ್. ರವಿ ಸೇರಿ 37 ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್ (Congress) ನಾಯಕರ ಪಾದಯಾತ್ರೆ ಮತ್ತೆ ನಿನ್ನೆಯಿಂದ (ಫೆ.27) ಆರಂಭವಾಗಿತ್ತು. ಜನವರಿ 9 ರಿಂದ ಶುರುವಾಗಿದ್ದ ಮೇಕೆದಾಟು (Mekedatu) ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ 2.O ಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3 ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ನಿನ್ನೆ ರಾಮನಗರದಿಂದ ಶುರುವಾದ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಇಂದು ಸಂಜೆ ಕೆಂಗೇರಿ ತಲುಪಲಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲು ಹಿನ್ನೆಲೆ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ. ನಾವು ಪಾದಯಾತ್ರೆ ಮಾಡುತ್ತಿರುವುದು ಸಿಎಂಗೆ ಗೊತ್ತಿತ್ತು. ಅಧಿಕಾರಿಗಳಿಗೂ ಗೊತ್ತು, ಅನುಮತಿ ಪಡೆದು ಮಾಡ್ತಿದ್ದೇವೆ. ಆದರೆ, ಇದೀಗ ಎಫ್ಐಆರ್ ದಾಖಲು ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಫ್ಲೆಕ್ಸ್ ತೆರವುಗೊಳಿಸುವ ಕೆಲಸವಾಗ್ತಿದೆ. ನಾವು ಜನಪರ ಹೋರಾಟ ಮಾಡಿದ್ರೆ ಕೇಸ್ ಹಾಕಿದ್ದಾರೆ. ಕೇಸ್ ಹಾಕಲಿ ನಾವು ನಡೆದುಕೊಂಡೆ ಜೈಲಿಗೆ ಹೋಗ್ತೀವಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿಯನ್ನು ನೀವು ಸಾಯಿಸಬಹುದು. ಆದ್ರೆ ನನ್ನ, ಸಿದ್ದರಾಮಯ್ಯರಂಥವರು ನೂರು ಜನ ಹುಟ್ತಾರೆ. ಎಫ್ಐಆರ್, ಮೊಕದ್ದಮೆಗಳಿಗೆ ನಾವು ಹೆದರುವುದಿಲ್ಲ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ 2.O; ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಮನಗರದಿಂದ್ಲೇ ಪಾದಯಾತ್ರೆಯ ಸೆಕೆಂಡ್ ಇನ್ನಿಂಗ್ಸ್ ಶುರು
ಇದನ್ನೂ ಓದಿ: ಕಾಂಗ್ರೆಸ್ ಕುಡಿಯುವ ನೀರಿಗೂ ರಾಜಕೀಯ ಬಣ್ಣ ಬಳೆಯುತ್ತಿದೆ; ಸಚಿವ ಡಾ. ಅಶ್ವಥ್ ನಾರಾಯಣ್
Published On - 3:58 pm, Mon, 28 February 22