ರಾಮನಗರ: ರಾಮನಗರದಲ್ಲಿ ರಾಜಕೀಯ ಪಕ್ಷಗಳ ನಡುವೆ ಕಿತ್ತಾಟ ಜೋರಾಗುತ್ತಿದ್ದು, ಈ ಹಿಂದೆ ಕಾಮಗಾರಿ ಶಂಕುಸ್ಥಾಪನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೆಶ್ವರ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ಎಸೆದಿದ್ದರು. ಈಗ ಮತ್ತೆ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಿದ್ದಾರೆ.
ಹೌದು ಇಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆಗೆ ಮಾಜಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಆಗಮಿಸಿದ್ದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದ ಬ್ಯಾನರ್ನಲ್ಲಿ ಶಾಸಕ ಮಂಜುನಾಥ್ ಹೆಸರು ಕೊನೆಯಲ್ಲಿ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ.
ಇದರ ಮಧ್ಯಯೇ ಬಾಲಕೃಷ್ಣ ಕಟ್ಟಡವನ್ನು ಉದ್ಘಾಟಿಸಿ ಕಾರಿನಲ್ಲಿ ವಾಪಸ್ ಆಗುತ್ತಿರುವಾಗ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಸಿದ್ದಾರೆ .
ಗಲಾಟೆಗೆ ಸಚಿವ ಅಶ್ವತ್ಥ್ ನಾರಾಯಣ ಸಂಬಂಧಿ ಶ್ರೀಧರ್ ಕಾರಣ
ಈ ಕುರಿತು ಮಾತನಾಡಿದ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಶಿಷ್ಟಾಚಾರ ಪ್ರಕಾರವೇ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಶಿಷ್ಟಾಚಾರ ಉಲ್ಲಂಘನೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಗಲಾಟೆಗೆ ಸಚಿವ ಅಶ್ವತ್ಥ್ ನಾರಾಯಣ ಸಂಬಂಧಿ ಶ್ರೀಧರ್ ಕಾರಣ. ಶ್ರೀಧರ್ ತನ್ನ ಪಟಾಲಂ ಕಟ್ಟಿಕೊಂಡು ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಮಾಡಿದವರು ಕಾಂಗ್ರೆಸ್, ಜೆಡಿಎಸ್ನವರ ಅಲ್ಲ ಬದಲಿಗೆ ಬಿಜೆಪಿ ಕಡೆಯವರು ಗಲಾಟೆ ಮಾಡಿದ್ದಾರೆ. ನಮ್ಮ ಕಾರಿನ ಮೇಲೂ ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Wed, 2 November 22