Tv9 Exclusive: ಅತ್ಯಾಚಾರಕ್ಕೂ ಹನಿಟ್ರ್ಯಾಪ್ಗೂ ವ್ಯತ್ಯಾಸವಿದೆ, ಕೆಲ ಮಠಗಳಲ್ಲಿ ಕಾಮ ವ್ಯಾಪಾರದ ಸರಕಾಗಿದೆ; ಲೈಂಗಿಕ ಚಿಕಿತ್ಸಕ ಡಾ ವಿನೋದ್ ಛಬ್ಬಿ
Dr Vinod Chabbi: ಇತರ ಅಪರಾಧಗಳಲ್ಲಿ ಅಪರಾಧಕ್ಕೆ ಒಳಗಾಗುವವರು ಸಂತ್ರಸ್ತರಾಗುತ್ತಾರೆ. ಆದರೆ ಹನಿಟ್ರ್ಯಾಪ್ನಲ್ಲಿ ಯಾರು ತಪ್ಪು ಮಾಡಿದರು ಎಂದು ಗುರುತಿಸುವುದೇ ಸವಾಲು.
ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಮತ್ತು ಆತ್ಮಹತ್ಯೆ ಬಗ್ಗೆ ಕರ್ನಾಟಕದ ಖ್ಯಾತ ಲೈಂಗಿಕ ಚಿಕಿತ್ಸಕ ಮತ್ತು ಮನಃಶಾಸ್ತ್ರಜ್ಞ ಡಾ ವಿನೋದ್ ಛಬ್ಬಿ ಈ ರೀತಿ ವಿಶ್ಲೇಷಿಸಿದ್ದಾರೆ. ‘ಟಿವಿ9 ಕನ್ನಡ ಸುದ್ದಿವಾಹಿನಿಗೆ ಗುರುವಾರ (ನ 3) ವಿಶೇಷ ಸಂದರ್ಶನ ನೀಡಿದ ವೇಳೆ ‘ಕಾವಿಧಾರಿಗಳ ಕಾಮ ಜಂಜಡ’ದ ಬಗ್ಗೆ ಅವರು ನೀಡಿದ ಪ್ರತಿಕ್ರಿಯೆಯ ಅಕ್ಷರ ರೂಪ ಇಲ್ಲಿದೆ…
‘ಪುರುಷ-ಸ್ತ್ರೀಯರ ನಡುವೆ ಆಕರ್ಷಣೆ ಸಹಜ. ಹನಿಟ್ರ್ಯಾಪ್ ಏಕೆ ನಡೆಯುತ್ತದೆ ಎನ್ನುವುದು ನಾವು ಪರಿಶೀಲಿಸಬೇಕಾದ ಮಹತ್ವದ ಪ್ರಶ್ನೆ. ಹನಿಟ್ರ್ಯಾಪ್ಗಳಿಂದ ಮಹನೀಯರ, ಗೌರವಾನ್ವಿತರ ಹೆಸರು ಕೆಡುತ್ತೆ. ಒಟ್ಟಾರೆ ಸಂಚಿನಲ್ಲಿ ಅಂಥವರ ಸ್ಥಾನಮಾನಗಳನ್ನು ಅಭದ್ರಪಡಿಸುವ ಕಾರಸ್ಥಾನ ಕಾಣಿಸುತ್ತದೆ. ಈ ಥರ ಏಕೆ ನಡೆಯುತ್ತೆ ಎನ್ನುವುದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಕಾಮವನ್ನು ಬಯಸುವ ಜನರು ಇರುವ ಕಡೆ ಅದಕ್ಕೆ ತಕ್ಕಂತೆ ಅನುಕೂಲ ಕಲ್ಪಿಸುವವರು ಇದ್ದೇ ಇರುತ್ತಾರೆ. ಇಂಥ ಸಂದರ್ಭಗಳಲ್ಲಿ ಕಾಮ ಎನ್ನುವುದು ವ್ಯಾಪಾರ, ಬ್ಯಾಕ್ಮೇಲ್ ಸರಕಾಗಿ ಉಪಯೋಗಿಸಲ್ಪಡುತ್ತೆ.
‘ಹನಿಟ್ರ್ಯಾಪ್ ಅಪರಾಧಕ್ಕೆ ಒಳಗಾಗುವವರು ಹೇಗಿದ್ದಾರೆ. ಇದರ ಬಗ್ಗೆ ಸ್ವಲ್ಪ ಯೋಚಿಸೋಣ. ಇತರ ಅಪರಾಧಗಳಲ್ಲಿ ಅಪರಾಧಕ್ಕೆ ಒಳಗಾಗುವವರು ಸಂತ್ರಸ್ತರಾಗುತ್ತಾರೆ. ಆದರೆ ಹನಿಟ್ರ್ಯಾಪ್ನಲ್ಲಿ ಯಾರು ತಪ್ಪು ಮಾಡಿದರು ಎಂದು ಗುರುತಿಸುವುದೇ ಸವಾಲು. ಅತ್ಯಾಚಾರಕ್ಕೂ ಹನಿಟ್ರ್ಯಾಪ್ಗೂ ಬಹಳ ವ್ಯತ್ಯಾಸವಿದೆ. ಅಲ್ಲಿ ಅತ್ಯಾಚಾರಕ್ಕೆ ಒಳಗಾದವರ ತಪ್ಪು ಏನೂ ಇರುವುದಿಲ್ಲ. ಅದೊಂದು ಗಂಭೀರ ಅಪರಾಧ. ಆದರೆ ಹನಿಟ್ರ್ಯಾಪ್ ಹಾಗಲ್ಲ. ಇಲ್ಲಿ ‘ಅವರೇ’ ಮೇಲೆ ಬೀಳ್ತಾರೆ. ಒಬ್ಬರು ಪ್ರಲೋಭನೆ ಒಡ್ಡುತ್ತಾರೆ. ಮತ್ತೊಬ್ಬರು ಪ್ರಲೋಭನೆಗೆ ಬಲಿಯಾಗುತ್ತಾರೆ.
‘ಕಾಮದ ಆಕರ್ಷಣೆ ಮನುಷ್ಯರಿಗೆ ಅತ್ಯಂತ ಸಹಜ. ಆದರೆ ಅದನ್ನು ಪೂರೈಸಿಕೊಳ್ಳಲು ಹೀಗೆಲ್ಲಾ ಮಾಡಬೇಕೆ? ಕೆಲ ಕಾವಿಧಾರಿಗಳು ತಮ್ಮ ಮನಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಕಾವಿ ತ್ಯಜಿಸಿ ಮದುವೆ ಮಾಡಿಕೊಂಡಿದ್ದಾರೆ. ಅದು ಶ್ಲಾಘನೀಯ. ಮಹತ್ವದ ಸ್ಥಾನದಲ್ಲಿರುವವರು ಮಾಮೂಲಿ ಜನರಂತೆ ಅಲ್ಲ. ಅವರನ್ನು ಸಮಾಜವು ಅಸಾಮಾನ್ಯರು ಎಂದು ವಿಶೇಷ ಸ್ಥಾನಮಾನ ನೀಡಿ ಗೌರವಿಸುತ್ತದೆ. ಕಾವಿಧಾರಿ ಸನ್ಯಾಸಿಗಳಲ್ಲಿ ದೇವರ ಸನ್ನಿಧಾನವಿದೆ, ಅವರು ದೈವಾಂಶ ಸಂಭೂತರು ಎಂದು ಜನರು ಆರಾಧಿಸುತ್ತಾರೆ-ಅಡ್ಡ ಬೀಳುತ್ತಾರೆ. ಮಹತ್ವದ ಸ್ಥಾನ ಪಡೆದವರು ಕಾಮ ಎನ್ನುವ ಸಾಮಾನ್ಯ ಮನುಷ್ಯರ ಸ್ಥಿತಿ ಗೆಲ್ಲಲು ಅಗದಿದ್ದರೆ ಪೀಠದಲ್ಲಿ ಏಕೆ ಕೂರಬೇಕು?
‘ಸ್ವಾಮೀಜಿಗಳಲ್ಲಿ ಆತ್ಮಸಂಯಮ ಕಾಪಾಡಿಕೊಳ್ಳುವ ಪರಿಣಿತಿ ಇರಬೇಕು. ಅದು ಸಾಧ್ಯವಾಗದಿದ್ದರೆ ಸಾಮಾನ್ಯರಂತೆಯೇ ಬದುಕಬೇಕು. ಸ್ಥಾನಕ್ಕೆ ತಕ್ಕಂತೆ ಜೀವನ ಪದ್ಧತಿಯೂ ಇರಬೇಕು’.
ಇದನ್ನೂ ಓದಿ: ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಪುರಾವೆಗಾಗಿ ಮಾಗಡಿ ಪೊಲೀಸರ ಹುಡುಕಾಟ, ಬಾಯಿ ಬಿಡದ ಆರೋಪಿಗಳು
Published On - 10:21 am, Thu, 3 November 22