ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಪುರಾವೆಗಾಗಿ ಮಾಗಡಿ ಪೊಲೀಸರ ಹುಡುಕಾಟ, ಬಾಯಿ ಬಿಡದ ಆರೋಪಿಗಳು

ಮೂವರೂ ಆರೋಪಿಗಳ ಮೊಬೈಲ್ ಪರಿಶೀಲನೆ ಮಾಡಿದರೂ ಅಗತ್ಯ ಮಾಹಿತಿ ಅಥವಾ ದತ್ತಾಂಶಗಳು ಪೊಲೀಸರಿಗೆ ಸಿಕ್ಕಿಲ್ಲ.

ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಪುರಾವೆಗಾಗಿ ಮಾಗಡಿ ಪೊಲೀಸರ ಹುಡುಕಾಟ, ಬಾಯಿ ಬಿಡದ ಆರೋಪಿಗಳು
ಆರೋಪಿ ನೀಲಾಂಬಿಕೆ (ಎಡಚಿತ್ರ), ಮೃತ ಬಸವಲಿಂಗ ಸ್ವಾಮೀಜಿ ಮತ್ತು ಆರೋಪಿ ಮೃತ್ಯುಂಜಯ ಸ್ವಾಮೀಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 02, 2022 | 12:35 PM

ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ (Basavalinga Swamiji Suicide Case) ಪ್ರಕರಣದ ತನಿಖೆಯನ್ನು ಮಾಗಡಿ ಪೊಲೀಸರು (Magadi Police) ಚುರುಕುಗೊಳಿಸಿದ್ದಾರೆ. ತಮ್ಮ ವಶದಲ್ಲಿರುವ ಮೂವರು ಆರೋಪಿಗಳನ್ನೂ ಎರಡು ದಿನಗಳಿಂದ ನಿರಂತರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಪೊಲೀಸರಿಗೆ ಈ ಆರೋಪಿಗಳು ಯಾವುದೇ ಮಾಹಿತಿ ನೀಡಿಲ್ಲ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಸಹ ಇಂದು (ನ 2) ವಿಚಾರಣೆ ನಡೆಸಿದರು. ಆದರೆ ಹೆಚ್ಚೇನೂ ಪ್ರಯೋಜನವಾಗಲಿಲ್ಲ.

ಬಸವಲಿಂಗ ಸ್ವಾಮೀಜಿ ಬ್ಲಾಕ್​ಮೇಲ್ ಪ್ರಕರಣದಲ್ಲಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ (ಎ1), ನೀಲಾಂಬಿಕೆ (ಎ2) ಮತ್ತು ನಿವೃತ್ತ ಶಿಕ್ಷಕ ಮಹದೇವಯ್ಯ (ಎ3) ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿಗಳು ಬಾಯಿಬಿಡದ ಹಿನ್ನೆಲೆಯಲ್ಲಿ ತಾಂತ್ರಿಕ ಪುರಾವೆಗಳ ಮೇಲೆ (ಟೆಕ್ನಿಕಲ್ ಎವಿಡೆನ್ಸ್) ಪೊಲೀಸರು ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೊಗಳನ್ನೇ ಆಧಾರವಾಗಿ ಇರಿಸಿಕೊಂಡು ಅದನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ್ ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಮೂವರೂ ಆರೋಪಿಗಳ ಮೊಬೈಲ್ ಪರಿಶೀಲನೆ ಮಾಡಿದರೂ ಅಗತ್ಯ ಮಾಹಿತಿ ಅಥವಾ ದತ್ತಾಂಶಗಳು ಪೊಲೀಸರಿಗೆ ಸಿಕ್ಕಿಲ್ಲ. ಒಂದು ವೇಳೆ ಪೊಲೀಸರಿಗೆ ವಿಡಿಯೊ ರೆಕಾರ್ಡ್ ಮಾಡಿರುವ ಮೊಬೈಲ್ ಸಿಕ್ಕರೆ ಪ್ರಕರಣದಲ್ಲಿ ಅದು ಮುಖ್ಯ ಪುರಾವೆಯಾಗುತ್ತದೆ. ಆದರೆ ಅದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಆರೋಪಿಗಳ ಮೊಬೈಲ್​ಗಳ ಪೊಲೀಸರ ಕೈಗೆ ಬರುವ ಹೊತ್ತಿಗೆ ಅವುಗಳಲ್ಲಿದ್ದ ಬಹುತೇಕ ಎಲ್ಲ ಮಾಹಿತಿ ಡಿಲೀಟ್ ಆಗಿದೆ. ವಾಟ್ಸಾಪ್ ಚಾಟ್​ಗಳನ್ನೂ ಕ್ಲಿಯರ್ ಮಾಡಲಾಗಿದೆ. ಈ ಮೊಬೈಲ್​ಗಳನ್ನು ವಿಧಿವಿಜ್ಞಾನ ಕೇಂದ್ರಕ್ಕೆ (ಎಫ್​ಎಸ್​ಎಲ್) ಕಳುಹಿಸಲು ಮಾಗಡಿ ಪೊಲೀಸರು ನಿರ್ಧರಿಸಿದ್ದಾರೆ. ಈಗಾಗಲೇ ಆರು ತಿಂಗಳ ಸಿಡಿಆರ್ ಮತ್ತು ಮೆಸೇಜ್​ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ವ್ಯಾಟ್ಸಪ್ ಚಾಟ್ ಹಿಸ್ಟರಿಗಾಗಿ ಬೆಂಗಳೂರು ಎಫ್​ಎಸ್​ಎಲ್ ಕಚೇರಿಗೆ ಮೊಬೈಲ್ ರವಾನಿಸಲಾಗಿದೆ. ಈ ವಿಡಿಯೊ ಯಾರಿಗೆಲ್ಲಾ ಶೇರ್ ಆಗಿದೆ ಮತ್ತು ಹಣಕ್ಕೆ ಇವರು ಬೇಡಿಕೆಯಿಟ್ಟಿದ್ದರೇ ಎಂಬ ಆಯಾಮದ ಬಗ್ಗೆಯೂ ಪೊಲೀಸರು ಗಮನ ಹರಿಸುತ್ತಿದ್ದಾರೆ.

ಹೇಳಿಕೆ ದಾಖಲಿಸಿದ ಸಚ್ಚಿದಾನಂದ ಮೂರ್ತಿ

ಕಂಚುಗಲ್​ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ಮೂರ್ತಿ ತಮ್ಮ ಹೇಳಿಕೆ ದಾಖಲಿಸಿದರು. ವಿಚಾರಣೆಗೆ ಹಾಜರಾಗುವಂತೆ ಅ 28ರಂದು ಮಾಗಡಿ ಪೊಲೀಸರು ಸೂಚಿಸಿದ್ದರು. ಬಂಡೇಮಠದ ಸ್ವಾಮೀಜಿ ತಮ್ಮ ಡೆತ್​ನೋಟ್​ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹೇಳಿಕೆ ದಾಖಲಿಸಲು ನಿರ್ಧರಿಸಿದ್ದರು. ಕೆಲವು ಸಿಡಿಗಳ ಕುರಿತು ಸಚ್ಚಿದಾನಂದ ಮೂರ್ತಿ ಸ್ವಾಮೀಜಿ ಗಮನಕ್ಕೆ ತಂದಿದ್ದರು. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಈ ಅಂಶವನ್ನೂ ಸಚ್ಚಿದಾನಂದ ಮೂರ್ತಿ ಪ್ರಸ್ತಾಪಿಸಿದ್ದಾರೆ.

ಹೊಸ ಮೊಬೈಲ್ ಖರೀದಿಸಿದ್ದ ನೀಲಾಂಬಿಕೆ

ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮುಖ್ಯ ಆರೋಪಿ ನೀಲಾಂಬಿಕೆ ವಿಡಿಯೊ ರೆಕಾರ್ಡ್ ಮಾಡಿದ್ದ ಮೊಬೈಲ್ ಏನು ಮಾಡಿದ್ದಾಳೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ವಿಡಿಯೋ ರೆಕಾರ್ಡ್​ ಮಾಡಿ ಅದನ್ನು ಮೃತ್ಯುಂಜಯಶ್ರೀ, ಮಹದೇವಯ್ಯಗೆ ವಿಡಿಯೋ ಕಳುಹಿಸಿದ್ದ ನೀಲಾಂಬಿಕೆ ನಂತರ ಮೊಬೈಲ್ ನಾಶಪಡಿಸಿ, ಮತ್ತೊಂದು ಮೊಬೈಲ್ ಖರೀದಿಸಿದ್ದಳು. ಸದ್ಯ ನೀಲಾಂಬಿಕೆಯ ಹಳೆಯ ಮೊಬೈಲ್​ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Published On - 12:35 pm, Wed, 2 November 22