ರಾಮನಗರದಲ್ಲಿ ಸತತ ಮಳೆಯಿಂದ 178 ಮನೆಗಳಿಗೆ ಹಾನಿ; 1.14 ಕೋಟಿ ರೂ. ಪರಿಹಾರ ವಿತರಣೆ
ಸತತ ಮಳೆಯಿಂದ ರಾಮನಗರ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ.
ರಾಮನಗರ: ಸತತ ಮಳೆಯಿಂದ ರಾಮನಗರ (Ramnagar) ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊತೆಗೆ ಜಿಲ್ಲೆಯ 70 ಸಂತ್ರಸ್ತರಿಗೆ 15 ಲಕ್ಷ ರೂ. ಒದಗಿಸಲಾಗಿದೆ ಎಂದು ಇಂದು (ಆಗಸ್ಟ್ 8) ಜಿಲ್ಲೆಯ ಹಲವು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಸಿ ಎನ್ ಅಶ್ವತ್ಥ ನಾರಾಯಣ (Ashwath Narayan) ಹೇಳಿದ್ದಾರೆ.
ಕುದೂರಿನಲ್ಲಿ ಕೆರೆ ನೀರು ನುಗ್ಗಿ ಮನೆ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದರು. ನಂತರ, ತುಂಬಿ ತುಳುಕುತ್ತಿರುವ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತುಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದರು. ಮನೆ ವಿಪರೀತ ಹಾನಿಗೊಳಗಾಗಿರುವ ಮೂವರಿಗೆ ತಲಾ 95 ಸಾವಿರ ರೂ. ನೀಡಲಾಯಿತು.
ಮಾಡಬಾಳು ಹೋಬಳಿಯ ಅಂಚಿಕುಪ್ಪೆಗೆ ಭೇಟಿ ನೀಡಿದ ಸಚಿವರು ಕೆರೆಕೋಡಿ ಒಡೆದನ್ನು ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕಲ್ಲದೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಡೆಯಲು ಮುಂದಡಿ ಇಡಲು ನಿರ್ದೇಶಿಸಿದರು.
ಸೋಲೂರು ಹೋಬಳಿಯ ಕೂಡ್ಲೂರು ಗೇಟ್ಗೆ ಭೇಟಿ ನೀಡಿದ ಅವರು, ಗೋಡೆ ಕುಸಿದು ಇಬ್ಬರು ಮಕ್ಕಳು ಬಲಿಯಾದ ನೇಪಾಳಿ ಕುಟುಂಬವನ್ನು ಭೇಟಿಯಾದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ‘ಈ ಮಕ್ಕಳು ನೇಪಾಳಿ ಕುಟುಂಬಕ್ಕೆ ಸೇರಿದವರಾದ್ದರಿಂದ ಪರಿಹಾರ ಕೊಡಲು ತಾಂತ್ರಿಕ ಅಡಚಣೆಗಳಿವೆ. ಆದರೂ ಪರಿಹಾರದ ಚೆಕ್ ಸಿದ್ಧಪಡಿಸಿ ಇಡಲಾಗಿದೆ. ಇರುವ ತೊಡಕುಗಳನ್ನು ನಿವಾರಿಸಿ 2-3 ದಿನಗಳಲ್ಲಿ ಚೆಕ್ ಕೊಡಲಾಗುವುದು’ ಎಂದು ಭರವಸೆ ನೀಡಿದರು.
ಸತತ ಮಳೆಯಿಂದ ಹಾನಿಗೊಳಗಾಗಿರುವ ಟಿಪ್ಪು ನಗರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಒಟ್ಟು 15 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು. ಕೊಂಡಾಪುರ- ಬಾಣಗಳ್ಳಿಗೆ ತೆರಳಿದ ಸಚಿವರ ನೇತೃತ್ವದ ತಂಡವು ಅಲ್ಲಿ ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ಸೇತುವೆಗೆ ಆಗಿರುವ ಹಾನಿಯನ್ನು ಪರಿಶೀಲಿಸಿತು.
ಜಿಲ್ಲಾ ಪ್ರವಾಸದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಸಭೆಯಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16 ಕೋಟಿ ರೂ. ಮತ್ತು ತಹಸೀಲ್ದಾರರ ಖಾತೆಯಲ್ಲಿ 2.50 ಕೋಟಿ ರೂ. ಹಣ ಇದೆ ಎಂದು ಸ್ಪಷ್ಟಪಡಿಸಿದರು.
ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವಕ್ಕೆಲ್ಲ ಕೇಂದ್ರ ಸರ್ಕಾರದ ಸಹಾಯವೂ ಇದೆ. ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.
Published On - 7:47 pm, Mon, 8 August 22