ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ನೀಡುವಂತೆ ಅಯೋಧ್ಯೆ ಟ್ರಸ್ಟ್​ಗೆ ಪತ್ರ ಬರೆಯುತ್ತೇನೆ: ಇಕ್ಬಾಲ್ ಹುಸೇನ್

ಕರ್ನಾಟಕದ ಮತ್ತೊಬ್ಬ ಶಿಲ್ಪಿ ಗಣೇಶ್ ಭಟ್ ಅವರು ಕೂಡ ಅಯೋಧ್ಯೆ ರಾಮ ಮಂದಿರಕ್ಕಾಗಿ ಶ್ರೀರಾಮನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಈ ವಿಗ್ರಹವನ್ನು ರಾಮನಗರದಲ್ಲಿ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ನೀಡುವಂತೆ ಅಯೋಧ್ಯೆ ಟ್ರಸ್ಟ್​ಗೆ ಪತ್ರ ಬರೆಯುತ್ತೇನೆ: ಇಕ್ಬಾಲ್ ಹುಸೇನ್
ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ನೀಡುವಂತೆ ಅಯೋಧ್ಯೆ ಟ್ರಸ್ಟ್​ಗೆ ಪತ್ರ ಬರೆಯುತ್ತೇನೆ ಎಂದ ರಾಮನಗರ ಶಾಸಕ ಇಕ್ಬಾಲ್ ಹುಸೇನ್
Follow us
| Updated By: Rakesh Nayak Manchi

Updated on: Jan 26, 2024 | 9:32 PM

ರಾಮನಗರ, ಜ.26: ಕನ್ನಡಿಗ ಗಣೇಶ್ ಭಟ್ ಕೆತ್ತಿರುವ ಶ್ರೀರಾಮ ಮೂರ್ತಿ ನೀಡುವಂತೆ ಕೋರಿ ಅಯೋದ್ಯೆ (Ayodhya) ಶ್ರೀರಾಮ ಜನ್ಮಭೂಮಿ ಟ್ರಸ್ಟ್​ಗೆ ಪತ್ರ ಬರೆಯಲು ರಾಮನಗರ (Ramanagara) ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಮನಗರದಲ್ಲಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಶಿಲ್ಪಿ ಗಣೇಶ್ ಭಟ್ ಕೆತ್ತನೆಯ ಶ್ರೀರಾಮನ ವಿಗ್ರಹವನ್ನು ನೀಡುವಂತೆ ಕೋರಿ ಪತ್ರ ಬರೆಯಲಾಗುವುದು ಎಂದಿದ್ದಾರೆ.

ಅಯೋಧ್ಯೆಯಲ್ಲಿ ಮೂರು ವಿಗ್ರಹ ಪೈಕಿ ಕನ್ನಡಿಗ ಗಣೇಶ್ ಭಟ್ ವಿಗ್ರಹವನ್ನು ರಾಮನಗರಕ್ಕೆ ನೀಡುವಂತೆ ಪತ್ರ ಬರೆಯಲಾಗುವುದು. ಗಣೇಶ್ ಭಟ್ ಅವರು ನಿನ್ನೆ ಕರೆಮಾಡಿದ್ದರು. ಜಿಲ್ಲೆಯ ಪರವಾಗಿ ಅವರಿಗೆ ಶುಭಾಶಯ ತಿಳಿಸಿದ್ದೇನೆ. ಸೂಕ್ಷ್ಮವಾದ ವಿಷಯ ನಿಜವಾದ ರಾಮಭಕ್ತರು ಎಂದು ತೋರುತ್ತದೆ. ವಿಗ್ರಹಕ್ಕಾಗಿ ಖಂಡಿತವಾಗಿಯೂ ಪತ್ರ ಬರೆಯುತ್ತೇನೆ ಎಂದರು.

ದೇವರಿಗಿಂತ ದೊಡ್ಡದು ಯಾವುದೂ ಇಲ್ಲ. ಈ ಬಜೆಟ್​ನಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬೇಡಿಕೆಯಿಟ್ಟಿದ್ದೇನೆ. ಪ್ರವಾಸೋದ್ಯಮ ಇಲಾಖೆಗೂ ಸಹ ಮನವಿ ಮಾಡಿದ್ದೇವೆ. ವಿಶೇಷವಾಗಿ ರಾಮೋತ್ಸವ ಹಾಗೂ ರಾಮ ಮಂದಿರ ಕಟ್ಟಲು ಮುಂದಾಗುತ್ತೇವೆ ಎಂದರು.

ಇದನ್ನೂ ಓದಿ: ರಾಮನ ವಿಗ್ರಹ ಅರ್ಪಿಸಿ ಅಯೋಧ್ಯೆಯಿಂದ ಬೆಂಗಳೂರಿಗೆ ಬಂದ ಅರುಣ್ ಯೋಗಿರಾಜ್​ಗೆ ಭವ್ಯ ಸ್ವಾಗತ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಂತರ ರಾಮನಗರದಲ್ಲಿ ಅದ್ದೂರಿಯಾಗಿ, ವಿಜೃಂಭಣೆಯಿಂದ ಮತ್ತು ಭಾರೀ ಪ್ರಮಾಣದಲ್ಲಿ ರಾಮೋತ್ಸವ ಮಾಡಬೇಕೆಂಬ ಮಾತು ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುತ್ತಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡುತ್ತಾ, ರಾಮನಗರದಲ್ಲಿ ರಾಮೋತ್ಸವ ಆಯೋಜಿಸುವುದು ನಿಶ್ಚಿತ, ಇದು ಸಾಮಾನ್ಯಮಟ್ಟದ ಕಾರ್ಯಕ್ರಮವಲ್ಲ, ಇತಿಹಾಸದ ಪುಟಗಳಲ್ಲಿ ದಾಖಲಾಗಬಹುದಾದ ಉತ್ಸವ ಆಗಲಿದೆ ಎಂದಿದ್ದರು.

ರಾಮೋತ್ಸವ ಯಾವ ಕಾರಣಕ್ಕೂ ಒಂದು ರಾಜಕೀಯ ಕಾರ್ಯಕ್ರಮವಲ್ಲ, ಇದರ ಅಯೋಜನೆಯಲ್ಲಿ ಎಲ್ಲ ಧರ್ಮ ಮತ್ತು ಎಲ್ಲ ವರ್ಗಗಳ ಜನ ಭಾಗಿಯಾಗಲಿದ್ದಾರೆ. ಉತ್ಸವಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರೆಲ್ಲರ ಜೊತೆ ಚರ್ಚೆ, ವಿಚಾರ ವಿನಿಮಯ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದರು.

ರಾಮನಗರ ರಾಮನ ಪಾದಸ್ಪರ್ಶವಾಗಿರುವ ನೆಲವಾಗಿರುವುದರಿಂದ ಇಲ್ಲಿ ಒಂದು ಭವ್ಯ ಮತ್ತು ಅದ್ಭುತವಾದ ರಾಮಮಂದಿರ ನಿರ್ಮಿಸಲು ತಮ್ಮ ನಾಯಕ ಡಿಕೆ ಸುರೇಶ್ ಯೋಜನೆ ರೂಪಿಸುತ್ತಿದ್ದಾರೆ. ಅವರು ಮತ್ತು ತಾನು ಪ್ರವಾಸೋದ್ಯಮ ಸಚಿವರೊಂದಿಗೆ ವಿಷಯ ಚರ್ಚಿಸಿದ್ದೇವೆ. ಬಜೆಟ್​ನಲ್ಲಿ ಅದಕ್ಕಾಗಿ ಅನುದಾನ ಮೀಸಲಿಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಭರವಸೆಯನ್ನು ಪ್ರವಾಸೋದ್ಯಮ ಸಚಿವರು ಭರವಸೆ ನೀಡಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ