ರಾಮನಗರ, (ಜುಲೈ 05): ಚನ್ನಪಟ್ಟಣ ಉಪಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಆಯ್ಕೆ ಗೊಂದಲ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ. ಹೌದು ಇದಕ್ಕೆ ಪೂರಕವೆಂಬಂತೆ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರು ತಾವೇ ಎನ್ಡಿಎ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇಂದು(ಜುಲೈ 05) ಚನ್ನಪಟ್ಟಣದಲ್ಲಿ ಮಾತನಾಡಿರುವ ಯೋಗೇಶ್ವರ್, ಎಚ್ಡಿ ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ ಎಂದು ಹೇಳಿದರು.
ಕಳೆದ ವಾರ ನಾನು ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ಹೋಗುತ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಆದ್ರೆ, ಎಚ್ಡಿ ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡದಲ್ಲಿ ಮತ್ತೊಂದು ಬೆಳವಣಿಗೆ: ಡಿಕೆಶಿ ಸ್ಪರ್ಧೆ ಇಲ್ಲ: ಮತ್ಯಾರು..?
ಕಳೆದ ವಾರದಲ್ಲಿ ಡಿಸಿಎಂ ಡಿಕೆಶಿ ಮೂರು ದಿನ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಉಪಚುನಾವಣೆ ದೃಷ್ಠಿಯಲ್ಲಿ ಮಾಡಿರೋ ಸರ್ಕಾರಿ ಸಂತೆ. ಯಾವುದೇ ಗುರಿ ಇಲ್ಲದೇ, ಯೋಜನೆ ಇಲ್ಲದೇ ಮಾಡಿರೋ ಕಾರ್ಯಕ್ರಮ. ಅಧಿಕಾರಿಗಳನ್ನ ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ. ಕಳೆದ ಒಂದು ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ, ಬಂದಿದ್ದೇನೆ ಅಂತ ಸುಳ್ಳು ಹೇಳ್ತಿದ್ದಾರೆ ಎಂದು ಟಾಂಗ್ ನೀಡಿದರು.
ಜನರಿಗೆ ಮನೆ ಕೊಡುತ್ತೇನೆ, ಸೈಟ್ ಕೊಡುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಟೌನ್ ವ್ಯಾಪ್ತಿ ಬಿಟ್ಟರೆ ಬಹುತೇಕ ತಾಲೂಕಿನ ಜನತೆಗೆ ಮನೆ ಸಮಸ್ಯೆ ಇಲ್ಲ. ಚುನಾವಣೆಗೆ ಟೈಂ ನಲ್ಲಿ ಮನೆ ಕೊಡ್ತೀವಿ ಅನ್ನೋದು ಸುಳ್ಳು. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಒನ್ ಮ್ಯಾನ್ ಶೋ ಮಾಡಿದ್ದಾರೆ. ಎಂಪಿಗೆ ಆಹ್ವಾನ ನೀಡಿಲ್ಲ, ನನಗೆ ಆಹ್ವಾನ ನೀಡಿಲ್ಲ. ಸರ್ಕಾರದ ಪ್ರೋಟೋಕಾಲ್ ಸರಿಯಾಗಿ ಫಾಲೋ ಮಾಡದೇ ಕಾರ್ಯಕ್ರಮ ಮಾಡಿದ್ದಾರೆ. ಕೇವಲ ಚುನಾವಣಾ ತಂತ್ರಕ್ಕೆ ಜನ ಸೇರಿಸಿ ಜಾತ್ರೆ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಕ್ಷೇತ್ರದಲ್ಲಿ ಡಿಕೆಶಿ ಅವರ ಸಾಕ್ಷಿ ಗುಡ್ಡೆ, ಕೊಡುಗೆ ಏನೂ ಇಲ್ಲ. ಚನ್ನಪಟ್ಟಣದಿಂದಲೇ ರಾಜಕೀಯ ಜೀವನ ಆರಂಭಿಸಿದ್ರೂ ಅವರ 40 ವರ್ಷದ ಅವಧಿಯಲ್ಲಿ ಅವರ ಕೊಡುಗೆ ಶೂನ್ಯ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಜಾತ್ರೆ ಮಾಡ್ತಿದ್ದಾರೆ. ಪ್ರೋಟೋಕಾಲ್ ಫಾಲೋ ಮಾಡಲಿಲ್ಲ ಅಂದ್ರೆ ಮೈತ್ರಿ ಪಕ್ಷದ ನಾಯಕರು ತಡೆ ಮಾಡ್ತಿವಿ. ಮುಂದಿನ ಕಾರ್ಯಕ್ರಮಗಳಿಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ