ರಾಮನಗರ: ಚನ್ನಪಟ್ಟಣದಲ್ಲಿ JDS, ಬಿಜೆಪಿ ಕಾರ್ಯಕರ್ತರ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಯೋಗೇಶ್ವರ್(CP Yogeshwar) ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ತಾಲೂಕು JDS ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶೀಶ್ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೆಶ್ವರ್ ಹಾಗೂ ಬೆಂಬಲಿಗರಾದ ರವೀಶ್, ಜಯಕುಮಾರ್, ಸ್ವಾಮಿ, ಜಯಂತ್, ಸುರೇಂದ್ರ, ರಾಜೇಶ್, ಎಂ ರಾಜು, ನಂಜೇಶ್, ಶಿವ ಕುಮಾರ್, ಜಯಸ್ವಾಮಿ, ಪ್ರಸನ್ನ ಎಂಬುವವರ ವಿರುದ್ದ ದೂರು ನೀಡಲಾಗಿದೆ. ನನ್ನ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಪೊಲೀಸರ ಸಮ್ಮುಖದಲ್ಲೇ ನಿನ್ನ ಹಾಗೂ ನಿಮ್ಮವರನ್ನು ಕೊಲೆ ಮಾಡಿ ಊತು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಸ್ನೇಹಿತರ ಮೇಲೆ ಗೂಂಡಾಗಿರಿ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯೋಗೆಶ್ವರ್ ಮತ್ತು ಬೆಂಬಲಿಗರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸುವಂತೆ ಆಶೀಶ್ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಚನ್ನಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ನಿರ್ಲಕ್ಷಿಸಲಾಗಿದೆ ಎಂಬ ಕಾರಣಕ್ಕೆ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿತ್ತು. ಅದು ಇದೀಗ ದೊಡ್ಡ ವಿವಾದವಾಗಿ ಬೆಳೆಯುತ್ತಿದೆ. ಎಂಎಲ್‌ಸಿ ಸಿ.ಪಿ. ಯೋಗೆಶ್ವರ್ ಹಾಗೂ ಬೆಂಬಲಿಗರ ವಿರುದ್ಧ JDS ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶೀಶ್ ದೂರು ನೀಡಿದ್ದಾರೆ. ನಿನ್ನೆ ಈ ವಿವಾದಕ್ಕೆ ಸಂಬಂಧಿಸಿ ಜೆಡಿಎಸ್ನ 14 ಕಾರ್ಯಕರ್ತರ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಅವರ ಕಾರು ಚಾಲಕ ವೆಂಕಟೇಶ್ ನೀಡಿದ್ದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದನ್ನೂ ಓದಿ: 6G ವಿಭಾಗದಲ್ಲಿ ಭಾರತ ಮುನ್ನಡೆ ಸಾಧಿಸಲಿದೆ ಎಂದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್
ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಅವರಿದ್ದ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತ ದಾಖಲಾಗಿರುವ ದೂರು ಆಧರಿಸಿ ಐಪಿಸಿ ಸೆಕ್ಷನ್ 143, 147, 341, 506 149 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೆ ಇದೀಗ ಸಿ.ಪಿ. ಯೋಗೆಶ್ವರ್ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ.
ಡಿವೈಎಸ್ಪಿ ಕಚೇರಿಗೆ ನಿಖಿಲ್
ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಟಾಪಟಿಯ ನಂತರ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದನ್ನು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಖಂಡಿಸಿದರು. ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದ ಅವರು ಎಸ್ಪಿ ಸಂತೋಷ್ ಬಾಬು ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಶಂಕುಸ್ಥಾಪನೆ ರದ್ದಾದ ನಂತರ ಈ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದೇಕೆ ಎಂದು ಡಿವೈಎಸ್ಪಿ ಟಿ.ಎ.ಓಂಪ್ರಕಾಶ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಜಟಾಪಟಿ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ತರಾತುರಿಯಲ್ಲಿ ಯೋಗೇಶ್ವರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲಿನ ಶಾಸಕರನ್ನೇ ಸಿಪಿವೈ ಕಡೆಗಣಿಸಿದ್ದಾರೆ. ಇದನ್ನು ಪ್ರಶ್ನಿಸಿದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ, ಎಫ್ಐಆರ್ ಸಹ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತರು ಕಲ್ಲು ಎಸೆದಿದ್ದಕ್ಕೆ ಸಾಕ್ಷಿ ಇದೆಯೇ? ಚನ್ನಪಟ್ಟಣದಲ್ಲಿ ಈ ಘಟನೆ ನಡೆಯಲು ಪೊಲೀಸರು, ರಾಜ್ಯ ಸರ್ಕಾರವೇ ಕಾರಣ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ