5G ಸೇವೆಗಳ ನಂತರ ಇದೀಗ 6G ವಿಭಾಗದಲ್ಲಿ ಮುನ್ನಡೆ ಸಾಧಿಸಲಿರುವ ಭಾರತ
ಪ್ರಧಾನಿ ಮೋದಿಯವರ ಆಶಯದಂತೆ 6Gಯಲ್ಲಿ ಭಾರತವು ಮುನ್ನಡೆ ಸಾಧಿಸಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 5G ಸೇವೆಗಳು ಮುಂಬರುವ 6 ತಿಂಗಳಲ್ಲಿ 200ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿರುತ್ತದೆ ಎಂದೂ ಹೇಳಿದ್ದಾರೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) 5G ಸೇವೆಗಳನ್ನು (5G Services) ಪ್ರಾರಂಭಿಸಿದ ಒಂದು ದಿನದ ನಂತರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು “ನಾವು 6ಜಿಯಲ್ಲಿ ಮುಂದೆ ಇರಬೇಕಾಗಿದೆ. ಪ್ರಧಾನಿ ಮೋದಿಯವರ ಆಶಯದಂತೆ 6Gಯಲ್ಲಿ ಭಾರತವು ಮುನ್ನಡೆ ಸಾಧಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು. 5G ಸೇವೆಗಳನ್ನು ಪ್ರಾರಂಭಿಸುವ ವಾರಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ದಶಕದ ಅಂತ್ಯದ ವೇಳೆಗೆ 6G ಅನ್ನು ಪ್ರಾರಂಭಿಸಲು ಕೇಂದ್ರವು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದರು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022ರ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಈ ಘೋಷಣೆ ಮಾಡಿದರು.
“ಟೆಲಿಕಾಂ ತಂತ್ರಜ್ಞಾನದ ಉಪಕರಣಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ವಿಶ್ವಕ್ಕೆ ರಫ್ತು ಮಾಡಲು ಸಿದ್ಧವಾಗಿದೆ” ಎಂದು ಸಚಿವ ವೈಷ್ಣವ್ ಹೇಳಿದ್ದಾರೆ. ಅಲ್ಲದೆ “5G ಸೇವೆಗಳು ಮುಂಬರುವ 6 ತಿಂಗಳಲ್ಲಿ 200ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿರುತ್ತವೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ದೇಶದ ಶೇಕಡಾ 80-90 ರಷ್ಟು ನಗರಗಳಲ್ಲಿ ಇದನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದರು.
“ಮುಂದಿನ ವರ್ಷ ಆಗಸ್ಟ್ 15 ರಿಂದ ಬಿಎಸ್ಎನ್ಎಲ್ ಕೂಡ 5G ಸೇವೆಗಳನ್ನು ನೀಡಲು ಪ್ರಾರಂಭಿಸುತ್ತದೆ. ಇದರೊಂದಿಗೆ 5G ಬೆಲೆಗಳು ಕಡಿಮೆ ಇರಲಿದೆ. ಇದರಿಂದ ಸಾಮಾನ್ಯ ಜನರು ಸಹ ಅದನ್ನು ಬಳಸಲು ಸಾಧ್ಯವಾಗುತ್ತದೆ. ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ದೇಶವೇ 5ಜಿ ಸೇವೆಗೆ ಸಂಪರ್ಕ ಕಲ್ಪಿಸಲಿದೆ” ಎಂದು ಐಟಿ ಸಚಿವರು ಹೇಳಿದ್ದಾರೆ.
ಇತ್ತೀಚಿನ 5G ನೆಟ್‌ವರ್ಕ್ ಬಳಕೆದಾರರಿಗೆ ವೇಗವಾದ ಇಂಟರ್ನೆಟ್ ವೇಗವನ್ನು ನೀಡುವುದಲ್ಲದೆ ವಿಪತ್ತು ನಿರ್ವಹಣೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಬೆಂಬಲವನ್ನು ನೀಡಲು ಸಹಾಯ ಮಾಡಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಜಿಯೋ ಅತ್ಯುನ್ನತ ಗುಣಮಟ್ಟದ ಮತ್ತು ಅತ್ಯಂತ ಕೈಗೆಟುಕುವ ದರಗಳಲ್ಲಿ ನೀಡುವುದನ್ನು ಖಚಿತಪಡಿಸುತ್ತದೆ ಎಂದು ಘೋಷಿಸಿದರು. ಟೆಲಿಕಾಂ ಆಪರೇಟರ್ ಡಿಸೆಂಬರ್ 2023ರ ವೇಳೆಗೆ ಭಾರತದ ಪ್ರತಿಯೊಂದು ಮೂಲೆಗೂ 5G ನೀಡುವುದಾಗಿ ಭರವಸೆ ನೀಡುತ್ತಿದೆ. ಏರ್‌ಟೆಲ್ ಇಂದಿನಿಂದ 8 ನಗರಗಳಲ್ಲಿ 5G ಅನ್ನು ಹೊರತರುವುದಾಗಿ ಘೋಷಿಸಿದೆ. ಎಲ್ಲಾ ನಗರಗಳ ಹೆಸರುಗಳು ತಿಳಿದಿಲ್ಲವಾದರೂ ಮುಂಬೈ, ದೆಹಲಿ, ವಾರಣಾಸಿ ಮತ್ತು ಬೆಂಗಳೂರು ಇಂದು 5G ಪಡೆಯಲಿದೆ ಎಂದು ಕಂಪನಿಯು ದೃಢಪಡಿಸಿದೆ. ವೊಡಾಫೋನ್ ಕೂಡ ತನ್ನ ಗ್ರಾಹಕರಿಗೆ 5ಜಿ ಸೇವೆಗಳನ್ನು ನೀಡಲಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 3 October 22