ರಾಮನಗರ: ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಕೇರಳದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಎಂಬಲ್ಲಿ ಸೋಮಾರ ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರ: ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾದ ಬಸ್
Image Credit source: tv9
Edited By:

Updated on: Mar 23, 2026 | 9:04 AM

ರಾಮನಗರ, ಮಾರ್ಚ್ 23: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (Ramanagara) ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ಚನ್ನಪಟ್ಟಣ ತಾಲೂಕಿನ ಸಂಕಲಗೆರೆ (Sankalagere) ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಕೆ ಟ್ರಾವೆಲ್ಸ್ ಎಂಬ ಬಸ್ ಅಪಘಾತಕ್ಕೀಡಾಗಿದ್ದು, ಮೃತರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದಾರೆ. ಮೃತರನ್ನು ಕೇರಳದ ಕಾಜಿಕೋಟೆಯ ಮೊಹಮ್ಮದ್ ಫರಾನ್(22), ಸುಲ್ಫಿ (45), ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್(45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಸಾಕೇರ್ ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರಿನ ಅಬ್ದುಲ್​, ಅಲೇನ್​ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸ್ಥಳದ ವಿಡಿಯೋ

ನತದೃಷ್ಟ ಪಿಕೆ ಟ್ರಾವೆಲ್ಸ್ ಬಸ್ ತಡರಾತ್ರಿ ಕೇರಳದ ಕ್ಯಾಲಿಕಟ್​​ನಿಂದ ಬೆಂಗಳೂರಿಗೆ ಹೊರಟಿತ್ತು. ಬೆಳಗಿನ ಜಾವ 4.10 ನಿಮಿಷಕ್ಕೆ ಅಪಘಾತ ಸಂಭವಿಸಿದೆ. ಬಸ್​ನಲ್ಲಿ ಒಟ್ಟು 42 ಜನರ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆ ಹೇಗಿತ್ತೆಂದರೆ, ಫೆನ್ಸಿಂಗ್​ಗೆ ಡಿಕ್ಕಿಹೊಡೆದ ಬಸ್ ನಂತರವೂ ಸುಮಾರು 100 ಮೀಟರ್ ಸಂಚರಿಸಿತ್ತು. ತಡೆಗೋಡೆ ಇಲ್ಲದೇ ಇದ್ದರೆ ಇನ್ನಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಇದನ್ನೂ ಓದಿ: ತುಮಕೂರಿನಲ್ಲಿ 7 ಕಾರುಗಳ ನಡುವೆ‌ ಸರಣಿ ಅಪಘಾತ

ಸದ್ಯ ಗಾಯಾಳಗಳನ್ನು ಹಾಗೂ ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ಚಾಲಕ ರಿಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Mon, 23 March 26

Follow Us