ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಅಧಿಕಾರಿಗಳ ಮೇಲೆ ಹರಿಹಾಯ್ದ ಡಿಕೆ ಶಿವಕುಮಾರ್: ಡಿಕೆಶಿ ವರ್ತನೆಗೆ ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಖಂಡನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2022 | 12:18 PM

‘ನನಗೆ ಅಂಥ ಯಾವುದೇ ಟೆಸ್ಟಿಂಗ್ ಅಗತ್ಯವಿಲ್ಲ. ನಾನು ಫಿಟ್ ಅಂಡ್ ಫೈನ್ ಇದ್ದೀನಿ’ ಎಂದು ಡಿ.ಕೆ.ಶಿವಕುಮಾರ್ ಕೊವಿಡ್ ಟೆಸ್ಟ್​ಗೆ ಖಡಾಖಂಡಿತವಾಗಿ ನಿರಾಕರಿಸಿದರು.

ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಅಧಿಕಾರಿಗಳ ಮೇಲೆ ಹರಿಹಾಯ್ದ ಡಿಕೆ ಶಿವಕುಮಾರ್: ಡಿಕೆಶಿ ವರ್ತನೆಗೆ ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಖಂಡನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us on

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕೊವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು. ‘ನನಗೆ ಅಂಥ ಯಾವುದೇ ಟೆಸ್ಟಿಂಗ್ ಅಗತ್ಯವಿಲ್ಲ. ನಾನು ಫಿಟ್ ಅಂಡ್ ಫೈನ್ ಇದ್ದೀನಿ’ ಎಂದು ಡಿ.ಕೆ.ಶಿವಕುಮಾರ್ ಖಡಾಖಂಡಿತವಾಗಿ ನಿರಾಕರಿಸಿದರು.

ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹಾಗೂ ಜಿಲ್ಲಾ ವೈದ್ಯಾಧಿಕಾರಿ ನಿರಂಜನ್ ಅವರ ವಿರುದ್ಧ ಡಿಕೆಶಿ ಹರಿಹಾಯ್ದರು. ನಾನೊಬ್ಬ ಜನಪ್ರತಿನಿಧಿ ನನಗೇ ಬ್ಲ್ಯಾಕ್​​ಮೇಲ್​ ಮಾಡ್ತಿದ್ದೀರಾ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ಹೇಳಿ. ನನಗೆ ಏನಾಗಿದೆ ಎಂದು ಟೆಸ್ಟ್​ ಮಾಡಲು ಬಂದಿದ್ದೀರಿ. ನಿಮ್ಮ ಹುದ್ದೆ ಯಾವುದು ಎಂದೆಲ್ಲಾ ಡಿಕೆಶಿ ಪ್ರಶ್ನೆ ಮಾಡಿದರು. ಕೊನೆಗೆ ನಾನು ಟೆಸ್ಟ್​ ಮಾಡಿಸಿಕೊಳ್ಳಲ್ಲ ಎಂದು ಅಧಿಕಾರಿಗಳನ್ನು ವಾಪಸ್​ ಕಳುಹಿಸಿದರು.

ಬಾಯಿಗೆ ಬಂದಂತೆ ಮಾತಾಡೋದು ಅವರ ಸಂಸ್ಕೃತಿ: ಸಿಎಂ ಬೊಮ್ಮಾಯಿ
ಡಿ.ಕೆ.ಶಿವಕುಮಾರ್ ಅವರ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಾಯಿಗೆ ಬಂದಂತೆ ಮಾತಾಡುವುದು ಅವರ ಸಂಸ್ಕೃತಿ. ನಾವು ಅವರ ಅರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಬಹುತೇಕ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿದ್ದೇವೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದರು.

ಜನರ ಹಿತ ಬಲಿಕೊಟ್ಟು ಪಾದಯಾತ್ರೆ: ಸುಧಾಕರ್

ಕರ್ನಾಟಕದ ಜನರ ಹಿತ ಬಲಿಕೊಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು. ಬೇರೆಬೇರೆ ಜಿಲ್ಲೆಯ ಜನರನ್ನು ಕರೆಸಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಕೊವಿಡ್ ಟೆಸ್ಟ್ ಮಾಡುವುದಕ್ಕೆ ಹೋದರೆ ನಿಂದಿಸುತ್ತಿದ್ದಾರೆ. ಕೊವಿಡ್ ನಿಯಮಗಳ ಮೂಲ ಆಶಯ ಹಾಳು ಮಾಡುವ ಕೀರ್ತಿ ಅವರಿಗೆ ಸಲ್ಲುತ್ತದೆ. ಜನರಿಗೊಂದು ರಾಜಕಾರಣಿಗಳಿಗೊಂದು ಕಾನೂನು ಇರಲು ಸಾಧ್ಯವೇ. ಇವರ ವರ್ತನೆಯನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಸುಧಾಕರ್ ಹರಿಹಾಯ್ದರು.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲು
ಇದನ್ನೂ ಓದಿ: Analysis: ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಗೆಲುವಿಗೆ ಬರೆಯಲಿದೆಯೇ ಮುನ್ನುಡಿ?

Published On - 12:18 pm, Mon, 10 January 22