ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಮೆಟ್ರೋ ರೈಲು ಜಿಲ್ಲೆಗೆ ಕಾಲಿಟ್ಟರೆ, ವಾಹನ ದಟ್ಟಣೆಯು ಕೂಡ ಕಡಿಮೆ ಆಗಲಿದೆ. ಅಲ್ಲದೆ ವಾಯು ಹಾಗೂ ಶಬ್ಧ ಮಾಲಿನ್ಯವು ಕೂಡ ನಿಯಂತ್ರಣಗೊಳ್ಳಲಿದೆ.
ರಾಮನಗರ: ನಮ್ಮ ಮೆಟ್ರೋ ಯೋಜನೆ ರಾಮನಗರ ಮತ್ತು ಮಾಗಡಿವರೆಗೂ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ ಬಳಿಕ ರಾಮನಗರ ಜಿಲ್ಲೆಯಲ್ಲಿ ಹೊಸ ಭರವಸೆ ಚಿಗುರೊಡೆದಿದೆ. ಅದರಲ್ಲೂ ನಿತ್ಯ ಬೆಂಗಳೂರಿಗೆ ಹೋಗಿಬರುವ ಉದ್ಯೋಗಿಗಳು, ಕಾರ್ಮಿಕರು ಮಾತ್ರವಲ್ಲದೇ ಕೈಗಾರಿಕೆಗಳಲ್ಲಿಯೂ ಸಾಕಷ್ಟು ನಿರೀಕ್ಷೆ ಮೂಡಿದೆ.
ರಾಜ್ಯ ರಾಜಧಾನಿಯಿಂದ ಸುಮಾರು 50 ಕಿ.ಮೀ ದೂರ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಿಂದ 100 ಕಿ.ಮೀ ದೂರದಲ್ಲಿನ ರಾಮನಗರ ಮತ್ತು ರಾಮನಗರ ಜಿಲ್ಲೆಯ ಮಾಗಡಿಯಿಂದ ಬೆಂಗಳೂರಿಗೆ ಸುಮಾರು 60 ಕಿ.ಮೀ ಪ್ರಯಾಣಿಸಬೇಕು. ಇನ್ನು ರಾಮನಗರ ಜಿಲ್ಲೆಯಿಂದ ಪ್ರತಿನಿತ್ಯ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಭಾರತೀಯ ರೈಲ್ವೆ, ಕೆಎಸ್‌ಆರ್‌ಟಿಸಿ, ಬಿಎಮ್ಟಿಸಿ ಮಾತ್ರವಲ್ಲದೇ ಖಾಸಗಿ ವಾಹನಗಳಲ್ಲಿಯು ಉದ್ಯೋಗಿಗಳು ಪ್ರತಿನಿತ್ಯ ಸಂಚಾರಿಸುತ್ತಾರೆ. ಇದರ ನಡುವೆ ನಮ್ಮ ಮೆಟ್ರೋ ಸಹ ರಾಮನಗರಕ್ಕೆ ಕಾಲಿಟ್ಟರೆ ಜಿಲ್ಲೆಯ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯು ಇನ್ನೊಂದು ವರ್ಷದೊಳಗೆ ಹತ್ತು ಪಥಗಳ ರಸ್ತೆಗಳಾಗಿ ಮೇಲ್ದೆರ್ಜೆಗೇರಲಿದೆ. ಇದರ ನಡುವೆ 2024 ರೊಳಗೆ ಜಿಲ್ಲೆಗೆ ಮೆಟ್ರೋ ರೈಲು ಬರಲಿದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಯಿಂದಾಗಿ, ರಾಮನಗರ ಜಿಲ್ಲೆ ಇನ್ನಷ್ಟು ಅಭಿವೃದ್ದಿಗೊಳ್ಳಲಿದೆ ಎಂಬ ಭರವಸೆ ಉಂಟಾಗಿದೆ. ಅಂದಹಾಗೆ ಬಸ್ಸಿನ ಮೂಲಕ ಪ್ರತಿನಿತ್ಯ ಒಂದರಿಂದ ಎರಡು ಗಂಟೆಗಳ ಕಾಲ ಬೆಂಗಳೂರಿಗೆ ಉದ್ಯೋಗಿಗಳು ಪ್ರಯಾಣಿಸಬೇಕು. ಈ ಮಧ್ಯೆ ಕೆಲವೊಮ್ಮೆ ಟ್ರಾಫಿಕ್ ಕಿರಿಕಿರಿಯಿಂದಾಗಿ ಪ್ರಯಾಣದ ಸಮಯ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ಮೆಟ್ರೋ ಪರಿಹಾರ ಮಾರ್ಗವಾಗಿದೆ. ಮೆಟ್ರೋ ಬಳಿಕ ಬೆಂಗಳೂರು ಸಂಚಾರ 30 ನಿಮಿಷಕ್ಕೆ ಇಳಿಯಲಿದೆ. ಇದರಿಂದಾಗಿ ಬೆಂಗಳೂರಿಗೆ ಪರ್ಯಾಯ ನಗರವಾಗಿ ರಾಮನಗರ ಬೆಳೆಯಲಿದೆ.
ಹೆದ್ದಾರಿ ಕೂಡ ಫ್ರಿ ಆಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಮೆಟ್ರೋ ರೈಲು ಜಿಲ್ಲೆಗೆ ಕಾಲಿಟ್ಟರೆ, ವಾಹನ ದಟ್ಟಣೆಯು ಕೂಡ ಕಡಿಮೆ ಆಗಲಿದೆ. ಅಲ್ಲದೆ ವಾಯು ಹಾಗೂ ಶಬ್ಧ ಮಾಲಿನ್ಯವು ಕೂಡ ನಿಯಂತ್ರಣಗೊಳ್ಳಲಿದೆ.
ರಾಜ್ಯ ರಾಜಧಾನಿಗೆ ಸನಿಹ ರಾಮನಗರ ಜಿಲ್ಲೆಯಲ್ಲಿನ ಬಹುತೇಕರು ವಾರಕ್ಕೊಮ್ಮೆಯಾದರೂ ಬೆಂಗಳೂರು ಮೆಟ್ಟಿಲು ಹತ್ತಲೇಬೇಕು. ಇದರ ನಡುವೆ ಹತ್ತು ಪಥದ ರಸ್ತೆಯೊಂದಿಗೆ ಚನ್ನಪಟ್ಟಣ, ರಾಮನಗರ, ಕೆಂಗೇರಿ ಮಾರ್ಗದೊಂದಿಗೆ ನೈಸ್ ರೋಡ್ ಸಹ ಇದೆ. ಮಾಗಡಿಯಿಂದಲ್ಲೂ ಸಹ ಬೆಂಗಳೂರು ತಲುಪಬಹುದು. ಕನಕಪುರದಿಂದ ಹಾರೋಹಳ್ಳಿ ಮಾರ್ಗವಾಗಿ ನೈಸ್ ರಸ್ತೆ ಇಲ್ಲವೇ, ತಲಘಟ್ಟಪುರದ ಮೂಲಕವು ಬೆಂಗಳೂರು ತಲುಪಬಹುದು. ಇಷ್ಟೆಲ್ಲ ಸೌಲಭ್ಯಗಳೊಂದಿಗೆ, ಹಾರೋಹಳ್ಳಿ ಹಾಗೂ ಬಿಡದಿ ಕೈಗಾರಿಕಾ ಪ್ರದೇಶಗಳು ಜಿಲ್ಲೆಗೆ ವರದಾನವಾಗಿದೆ.
ರಾಜ್ಯ ರಾಜಧಾನಿ ಸಂಪರ್ಕಿಸಲು ಇಷ್ಟೆಲ್ಲ ಸೌಕರ್ಯಗಳಿದ್ದರೂ, ಟ್ರಾಫಿಕ್ ಜಾಮ್‌ನಿಂದಾಗಿ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋ ಜಿಲ್ಲೆಗೆ ಕಾಲಿಟ್ಟರೆ, ಈ ಬವಣೆಯು ತಪ್ಪಲಿದ್ದು, ಬೆಂಗಳೂರಿಗರು ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಬಹುದು. ಅಲ್ಲದೆ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿಯೇ ನೆಲೆಸಬಹುದು. ನಿತ್ಯ ಅಪ್ ಅಂಡ್ ಡೌನ್ ಮಾಡುತ್ತಿರುವ ಸರಕಾರಿ ಅಧಿಕಾರಿಗಳು, ನೌಕರರು ಟ್ರಾಫಿಕ್ ಜಾಮ್ ನೆಪ ನೀಡಿ, ಕಚೇರಿಗಳಿಗೆ ತಡವಾಗಿ ಬರುವುದು, ಕಚೇರಿಯಿಂದ ಬೇಗನೆ ಬೆಂಗಳೂರು ಕಡೆಗೆ ಮುಖ ಮಾಡುವ ಸಮಸ್ಯೆಗಳಿಗೂ ಇತಿಶ್ರೀ ಹಾಡಬಹುದು.
ಅವಳಿ ನಗರಕ್ಕೂ ಪೂರಕ ರಾಮನಗರ ಹಾಗೂ ಚನ್ನಪಟ್ಟಣದ ನಡುವಿನ 12 ಕಿ.ಮೀ ಅಂತರವನ್ನು ಕೂಡಿಸಿ, ಅವಳಿ ನಗರವನ್ನಾಗಿ ಮಾಡಬೇಕು ಎಂಬ ಕೂಗಿಗೂ ನಮ್ಮ ಮೆಟ್ರೋ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ. ಚನ್ನಪಟ್ಟಣದಿಂದ ರೈಲ್ವೆ ಮೂಲಕ ನೇರವಾಗಿ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುವವರು, ರಾಮನಗರದ ಮೂಲಕ ನಮ್ಮ ಮೆಟ್ರೋದಲ್ಲಿ ಸಂಚರಿಸುವ ವ್ಯವಸ್ಥೆ ಶುರುವಾದರೆ, ರಾಮನಗರ ಕೇಂದ್ರಿಯ ಸ್ಥಾನವಾಗಲಿದೆ. ಇದರೊಂದಿಗೆ ಬಿಡದಿಯು ಬೆಂಗಳೂರಿಗೆ ಬಹುತೇಕ ಸೇರಿಕೊಳ್ಳಲಿದೆ. ಇದರ ಮೂಲಕ ಬಿಡದಿಯಿಂದ ರಾಮನಗರ ಮಾರ್ಗವಾಗಿ ಚನ್ನಪಟ್ಟಣದ ವರೆಗೂ ಒಂದೇ ನಗರವಾಗಿ ಅಭಿವೃದ್ಧಿಗೊಳ್ಳುವ ಸಾಧ್ಯತೆಯೂ ಹೆಚ್ಚು.
ಈ ಯೋಜನೆ ಶೀಘ್ರವೇ ಆಗಬೇಕು. ಇದರಿಂದ ಇಲ್ಲಿಯೇ ಜನರು ವಾಸ ಮಾಡಬೇಕು. ಜನರು ಬೆಂಗಳೂರಿಗೆ ಎಲ್ಲ ಭಾಗಗಳಿಗೂ ಇಲ್ಲಿಂದಲೇ ಸಂಚಾರಿಸಲು ಅನುಕೂಲವಾಗಲಿದೆ. ದೊಡ್ಡ ಸುಧಾರಣೆ ಇದರಿಂದ ಆಗಲಿದೆ. ಆ ಮೂಲಕ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಅನುಕೂಲ ಆಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ ಇದನ್ನೂ ಓದಿ: Namma Metro: ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಆಗಸ್ಟ್ 29 ಮಧ್ಯಾಹ್ನ 12 ಗಂಟೆಯಿಂದ ಮೆಟ್ರೋ ಸಂಚಾರ ಆರಂಭ
ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ವಿಸ್ತರಿಸುವ ಚಿಂತನೆ ಇದೆ; ಸಿಎಂ ಬಸವರಾಜ ಬೊಮ್ಮಾಯಿ
Published On - 9:38 am, Wed, 1 September 21