ರಾಮನಗರ, ಜುಲೈ 13: ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿರಸ್ಕರಿಸಿರುವುದನ್ನು ಬಿಜೆಪಿ ಸಂಸದ, ಡಾ. ಸಿಎನ್ ಮಂಜುನಾಥ್ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮೆಡಿಕಲ್ ಕಾಲೇಜಿಗೆ ಅರ್ಜಿ ಸಲ್ಲಿಸಿರುವುದೇ ತಪ್ಪು. ಅಲ್ಲಿಗೆ 600 ಹಾಸಿಗೆಗಳ ಆಸ್ಪತ್ರೆ ಬೇಕಿತ್ತು. ಆಸ್ಪತ್ರೆಯನ್ನು ಕಟ್ಟಿಯೇ ಇಲ್ಲ. ಬೋಧಕರನ್ನು ನೇಮಕ ಮಾಡಬೇಕು. ಅದನ್ನೂ ಮಾಡಿಲ್ಲ. ಇಷ್ಟು ಮಾಡದೆ ಅರ್ಜಿ ಹಾಕುವುದೇ ತಪ್ಪು ಎಂದು ಹೇಳಿದರು.
ಮೂಲ ಸೌಕರ್ಯ ಯಾವುದೂ ಇಲ್ಲ. ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸದೇ ನಾವು ಲೋಕಸಭೆಯಲ್ಲಿ ಮಾತನಾಡಿದರೆ ಆಗುವುದಿಲ್ಲ. ಸುಮ್ಮನೇ, ‘ಇವರು ವೈದ್ಯರಾಗಿ ವಂಚಿಸುತ್ತಿದ್ದಾರೆ’ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಇದು ರಾಜ್ಯ ಸರ್ಕಾರ ಪ್ರಮಾದ ಎಂದು ಮಂಜುನಾಥ್ ಸ್ಪಷ್ಟಪಡಿಸಿದರು.
ರಾಮನಗರಕ್ಕೆ ಮರು ನಾಮಕರಣ ಮಾಡುವ ಬಗ್ಗೆ ಹಾಸನದವರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂಬ ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು 40 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇವೆ. ಆಗ ಅವರೇ (ಬಾಲಕೃಷ್ಣ) ಬೆಂಗಳೂರಿನಲ್ಲಿ ಇರಲಿಲ್ಲ. ಹಿಂದೆ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯೇ ಆಗಿತ್ತು ಅಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಂದು ಸರಿಯಾದ ಮೆಡಿಕಲ್ ಕಾಲೇಜು ಮಾಡಲು ಇವರಿಂದ ಆಗಿಲ್ಲ. ವೈದ್ಯರನ್ನು ನೇಮಕ ಮಾಡಲೂ ಆಗಿಲ್ಲ. ಮೊದಲು ಅದನ್ನ ಮಾಡಲಿ ಎಂದು ಬಾಲಕೃಷ್ಣಗೆ ಟಾಂಗ್ ನೀಡಿದರು.
ಇದನ್ನೂ ಓದಿ: ಕನಕಪುರ, ರಾಮನಗರಕ್ಕೆ ಇಲ್ಲ ಮೆಡಿಕಲ್ ಕಾಲೇಜು: ಪ್ರಸ್ತಾವನೆ ತಿರಸ್ಕರಿಸಿದ ಎನ್‌ಎಂಸಿ
ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಚಾರವಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಇತ್ತೀಚೆಗೆ ತಿರಸ್ಕರಿಸಿತ್ತು. ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು. ಇದು ಡಿಸಿಎಂ ಡಿಕೆ ಶಿವಕುಮಾರ್ಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ