ಕನಕಪುರ, ರಾಮನಗರಕ್ಕೆ ಇಲ್ಲ ಮೆಡಿಕಲ್ ಕಾಲೇಜು: ಪ್ರಸ್ತಾವನೆ ತಿರಸ್ಕರಿಸಿದ ಎನ್‌ಎಂಸಿ
ಕರ್ನಾಟಕದ ಐದು ಕಡೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಮೂರಕ್ಕೆ ಮಾತ್ರ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದೆ. ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಇದಕ್ಕೆ ಕಾರಣವೇನು? ಯಾವೆಲ್ಲ ಕಾಲೇಜುಗಳಿಗೆ ಅನುಮತಿ ದೊರೆತಿದೆ ಎಂಬ ವಿವರ ಇಲ್ಲಿದೆ.

ನವದೆಹಲಿ, ಜುಲೈ 9: ಕನಕಪುರ ಹಾಗೂ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಚಾರವಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿರಸ್ಕರಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಈ ನಿರ್ಧಾರದಿಂದ ಡಿಸಿಎಂ ಡಿಕೆ ಶಿವಕುಮಾರ್ಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವರು ಅತೀವ ಆಸಕ್ತಿ ವಹಿಸಿದ್ದರು.
ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಆದರೆ, ಪ್ರಸ್ತಾವಿತ ಐದು ಕಾಲೇಜುಗಳ ಪೈಕಿ ಮೂರಕ್ಕೆ ಒಪ್ಪಿಗೆ ನೀಡಿದೆ.
ಎಲ್ಲೆಲ್ಲ ಮೆಡಿಕಲ್ ಕಾಲೇಜು?
ಬೆಂಗಳೂರು ಉತ್ತರದ ವ್ಯಾಪ್ತಿಯ ಬಿಜಿಎಸ್ ವೈದ್ಯಕೀಯ ಕಾಲೇಜು, ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ & ರಿಸರ್ಚ್ ಸೆಂಟರ್ ಹಾಗೂ ಬಾಗಲಕೋಟೆಯ ಎಸ್‌ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಪ್ಪಿಗೆ ನೀಡಿದೆ.
27 ವೈದ್ಯಕೀಯ ಕಾಲೇಜುಗಳಿಗೆ ದಂಡ
ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಸೇರಿದಂತೆ ಅನೇಕ ಮೂಲಸೌಕರ್ಯಗಳ ಕೊರತೆ ಇರುವುದು ಗೊತ್ತಾಗಿದ್ದು, ಈ ಸಂಬಂಧ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಭಾರಿ ಮೊತ್ತದ ದಂಡ ವಿಧಿಸಿತ್ತು.
ಇದನ್ನೂ ಓದಿ: ಕರ್ನಾಟಕದ 27 ವೈದ್ಯಕೀಯ ಕಾಲೇಜುಗಳಲ್ಲಿಲ್ಲ ಮೂಲಸೌಕರ್ಯ: ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಬಿತ್ತು ಭಾರಿ ದಂಡ
ಇದರಲ್ಲಿ ಸರ್ಕಾರಿ ಸ್ವಾಮ್ಯದ ಕೆಆರ್ಐಎಂಎಸ್ ಕಾರವಾರ, ಎಂಎಂಸಿಆರ್ಐ ಮೈಸೂರು, ಜಿಮ್ಸ್ ಗುಲ್ಬರ್ಗ, ಸಿಮ್ಸ್ ಶಿವಮೊಗ್ಗ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಿಮ್ಸ್ ಚಾಮರಾಜನಗರ ಕಾಲೇಜುಗಳಿಗೆ ತಲಾ 3 ಲಕ್ಷ ರೂ. ದಂಡ ವಿಧಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ಗೂ 2 ಲಕ್ಷ ರೂ. ದಂಡ ವಿಧಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Tue, 9 July 24