ಕರ್ನಾಟಕದ 27 ವೈದ್ಯಕೀಯ ಕಾಲೇಜುಗಳಲ್ಲಿಲ್ಲ ಮೂಲಸೌಕರ್ಯ: ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಬಿತ್ತು ಭಾರಿ ದಂಡ
ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಸೇರಿದಂತೆ ಅನೇಕ ಮೂಲಸೌಕರ್ಯಗಳ ಕೊರತೆ ಇರುವುದು ತಿಳಿದುಬಂದಿದೆ. ಪರಿಣಾಮವಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು 27 ವೈದ್ಯಕೀಯ ಕಾಲೇಜುಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದೆ. ಯಾವೆಲ್ಲ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ? ಮೂಲಸೌಕರ್ಯ ಕೊರತೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜುಲೈ 9: ಕರ್ನಾಟಕದಾದ್ಯಂತ ಸುಮಾರು 27 ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆ ಇರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ರಾಜ್ಯಕ್ಕೆ ಮುಜುಗರ ತಂದೊಡ್ಡುವಂಥ ಬೆಳವಣಿಗೆಯೊಂದರಲ್ಲಿ, ಮೂಲಸೌಕರ್ಯ ಕೊರತೆ ಕಾರಣಕ್ಕೆ ಪ್ರಮುಖ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ದಂಡ ವಿಧಿಸಿದೆ.
ಪ್ರಾಧ್ಯಾಪಕರ ಕೊರತೆ ಪ್ರಮುಖ ಸಮಸ್ಯೆ
ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಈ ಹೆಚ್ಚಿನ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರ ಕೊರತೆ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಳೆಯ ಮತ್ತು ಪ್ರಸಿದ್ಧ ಕಾಲೇಜುಗಳು ಸಹ ಈ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿದೆ.
15 ಲಕ್ಷ ರೂ. ವರೆಗೆ ದಂಡ
ಮೂಲಸೌಕರ್ಯ ಕೊರತೆಯ ಕಾರಣಕ್ಕೆ ವೈದ್ಯಕೀಯ ಕಾಲೇಜುಗಳಿಗೆ 2 ಲಕ್ಷದಿಂದ 15 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗಿದೆ. ಐದು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಗರಿಷ್ಠ ಮೊತ್ತದ ದಂಡ ವಿಧಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಸರ್ಕಾರಿ ಸ್ವಾಮ್ಯದ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಎಂಐಎಂಎಸ್ ಮಂಡ್ಯ ಮತ್ತು ವೈಐಎಂಎಸ್ ಯಾದಗಿರಿಗೆ ಗರಿಷ್ಠ 15 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಕೆಆರ್ಐಎಂಎಸ್ ಕಾರವಾರ; ಎಂಎಂಸಿಆರ್ಐ ಮೈಸೂರು, ಜಿಮ್ಸ್ ಗುಲ್ಬರ್ಗ, ಸಿಮ್ಸ್ ಶಿವಮೊಗ್ಗ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಿಮ್ಸ್ ಚಾಮರಾಜನಗರ (ತಲಾ 3 ಲಕ್ಷ ರೂ.) ಮತ್ತು ಹುಬ್ಬಳ್ಳಿಯ ಕಿಮ್ಸ್ಗೂ ದಂಡ (ರೂ. 2 ಲಕ್ಷ) ವಿಧಲಾಗಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ದಂಡ
11 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೂಡ ಎನ್‌ಎಂಸಿ ಸೂಚಿಸಿದ ಮಾನದಂಡಗಳಿಗೆ ಸಮನಾಗಿ ಮೂಲಸೌಕರ್ಯಗಳಿಲ್ಲ ಎಂದು ಕಂಡುಬಂದೆ. ಹೀಗಾಗಿ ಆ ಕಾಲೇಜುಗಳಿಗೂ ದಂಡ ವಿಧಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಇಲಿ ಜ್ವರವನ್ನು ಕಡೆಗಣಿಸಬೇಡಿ, ತಡೆಗಟ್ಟುವ ಕ್ರಮದ ಬಗ್ಗೆ ತಜ್ಞರ ಸಲಹೆ ಏನು?
ಮೊದಲಿಗೆ ಎನ್ಎಂಸಿಯ ತಜ್ಞರ ಸಮಿತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಸ್ಥಳೀಯ ತಪಾಸಣಾ ಸಮಿತಿಯ ಜತೆಗೂಡಿ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯವರು ಮೂಲಭೂತ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದರು ಎಂದು ವರದಿ ತಿಳಿಸಿದೆ.
ಇದೇ ವೇಳೆ, ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ಎನ್‌ಎಂಸಿ ದಂಡ ವಿಧಿಸಿರುವ ಬಗ್ಗೆ ನನಗೆ ತಿಳಿದಿದೆ. ಈ ಸಂಸ್ಥೆಗಳಲ್ಲಿ ಕೆಲವು ನ್ಯೂನತೆಗಳಿರುವುದು ನಿಜ. ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ