ರಾಮನಗರದ ಕೂಟಗಲ್ ಬೆಟ್ಟದಲ್ಲಿ ಅಕ್ರಮ ಹಣ ವಸೂಲಿ: ಸರ್ಕಾರಿ ನಿಯಮಕ್ಕಿಲ್ಲ ಬೆಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 28, 2021 | 9:07 PM

ಟ್ರಕ್ಕಿಂಗ್ ಸೇರಿದಂತೆ ಬೆಟ್ಟದ ಸೊಬಗಿಗೆ ಬೆರಗಾಗಿ ವಾರಂತ್ಯದಲ್ಲಿ ಸಾವಿರಾರು ಜನರು ರಾಜ್ಯದ ವಿವಿಧ ಮೂಲಗಳಿಂದ ಈ ಬೆಟ್ಟ ನೋಡಲು ಬರುತ್ತಾರೆ

ರಾಮನಗರದ ಕೂಟಗಲ್ ಬೆಟ್ಟದಲ್ಲಿ ಅಕ್ರಮ ಹಣ ವಸೂಲಿ: ಸರ್ಕಾರಿ ನಿಯಮಕ್ಕಿಲ್ಲ ಬೆಲೆ
ರಾಮನಗರ ಜಿಲ್ಲೆ ಕೂಟಗಲ್ ಬೆಟ್ಟದ ವಿಹಂಗಮ ನೋಟ
Follow us on

ರಾಮನಗರ: ಹಚ್ಚಹಸಿರು, ಬೆಟ್ಟಗುಟ್ಟಗಳ ಮೈಮಾಟದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ತಾಲೂಕಿನ ಕೂಟಗಲ್ ತಿಮ್ಮಪ್ಪ ಬೆಟ್ಟದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ದೇವರ ಹೆಸರಿನಲ್ಲಿ ಅಕ್ರಮವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ದಂಧೆ ನಡೆಯುತ್ತಿದೆ. ಟ್ರಕ್ಕಿಂಗ್ ಸೇರಿದಂತೆ ಬೆಟ್ಟದ ಸೊಬಗಿಗೆ ಬೆರಗಾಗಿ ವಾರಂತ್ಯದಲ್ಲಿ ಸಾವಿರಾರು ಜನರು ರಾಜ್ಯದ ವಿವಿಧ ಮೂಲಗಳಿಂದ ಈ ಬೆಟ್ಟ ನೋಡಲು ಬರುತ್ತಾರೆ. ಜೊತೆಗೆ, ಪಕ್ಕದಲ್ಲೇ ಇರುವ ತಿಮ್ಮಪ್ಪನ ದರ್ಶನಕ್ಕೂ ಸಹ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಹೊಸದಾಗಿ ಟ್ರಸ್ಟ್ ನಿರ್ಮಿಸಿಕೊಂಡು, ಪ್ರವಾಸಿಗರಿಂದ ದುಬಾರಿ ಶುಲ್ಕ ವಸೂಲಿಗೆ ಇಳಿದಿದ್ದಾರೆ. ಬೈಕ್‌ಗಳಿಗೆ ₹ 20 ಹಾಗೂ ಪ್ರತಿ ಕಾರಿಗೆ ₹ 50 ವಸೂಲಿ ಮಾಡುತ್ತಿದ್ದಾರೆ. ಆದರೆ, ಇದು ಸರ್ಕಾರಿ ಟೆಂಡರ್ ಅಲ್ಲವೇ ಅಲ್ಲ ಎಂಬುದು ವಿಶೇಷ.

ಕೂಟಗಲ್‌ನಲ್ಲಿ ಅರಣ್ಯ ಇಲಾಖೆಗೆ ಸೇರಿದ ನೂರಾರು ಎಕರೆ ಇದೆ. ಇದು ಕಿರು ಹಾಗೂ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದೆ. ಇಲ್ಲಿ ತಿಮ್ಮಪ್ಪ ಸ್ವಾಮಿ ದೇವಸ್ಥಾನವು ಇದೆ. ಇಲ್ಲಿ ದೇವಾಲಯಕ್ಕೆ ಬರುವವರಿಗಿಂತ ಹೆಚ್ಚಾಗಿ ಅರಣ್ಯ ಇಲಾಖೆಗೆ ಸೇರಿದ ಬೆಟ್ಟ ಏರಲು, ಹಸಿರು ಸೌಂದರ್ಯ ಸವಿಯಲು ನೂರಾರು ಜನ ಬರುತ್ತಾರೆ. ಅದರಲ್ಲೂ ವಾರಂತ್ಯದಲ್ಲಿ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ತೆರೆದಿರುವ ಕೆಲವರು, ದೇವಾಲಯಕ್ಕೆ ಹೋಗುವವರನ್ನು ಮಾತ್ರವಲ್ಲದೇ, ಪ್ರವಾಸಿಗರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ.

ಅರಣ್ಯ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿ ಮುಜರಾಯಿ ಇಲಾಖೆ ಹಣ ವಸೂಲಿ ಮಾಡುವಂತೆಯೇ ಇಲ್ಲ. ಗ್ರಾಮ ಪಂಚಾಯಿತಿಗಳು ಈ ರೀತಿ ಹಣ ವಸೂಲಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಸಹ ದೇವಾಲಯದ ಅಭಿವೃದ್ಧಿ ನೆಪದಲ್ಲಿ ಪ್ರವಾಸಿಗರಿಂದಲ್ಲೂ ಹಣ ಪೀಕಲಾಗುತ್ತಿದೆ. ಮುತ್ತತ್ತಿ, ರಾಮದೇವರ ಬೆಟ್ಟದಲ್ಲಿಯೂ ಸಹ ವಸೂಲಿ ನಡೆಯುತ್ತಿಲ್ಲ. ರಾಮದೇವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಕೇವಲ 10 ರೂಪಾಯಿಯನ್ನಷ್ಟೇ ಸ್ವಚ್ಛತೆಗಾಗಿ ಪಡೆಯುತ್ತಿದೆ. ಆದರೆ, ಕೂಟಗಲ್‌ ಬೆಟ್ಟದಲ್ಲಿ ಮಾನದಂಡಗಳೇ ಇಲ್ಲದೆ ಹಣ ವಸೂಲಿ ಮಾಡುತ್ತಿರುವುದು ವಿಪರ್ಯಾಸ.

ಈ ದೇವಾಲಯವು ಸಹ ಅರಣ್ಯ ಇಲಾಖೆಗೆ ಸೇರಿದೆ. ಹೀಗಾಗಿ ಹಣ ವಸೂಲಿ ಮಾಡಿದರೂ, ಅರಣ್ಯ ಇಲಾಖೆಯೇ ಮಾಡಬೇಕು. ಆದರೆ, ಟ್ರಸ್ಟ್ ಹೆಸರಿನಲ್ಲಿ ಹಿಗ್ಗಾಮುಗ್ಗ ಹಣ ಪೀಕುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.

ಕೂಟಗಲ್ ಬೆಟ್ಟ ಮತ್ತು ವಾಹನ ಪಾರ್ಕಿಂಗ್​ಗೆ ಸಂಗ್ರಹಿಸಿರುವ ರಸೀದಿ

ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಸರಕಾರಿ ರೂಲ್ಸ್ ಪ್ರಕಾರ ಟೆಂಡರ್ ಕರೆದು ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಕು. ಜತೆಗೆ, ಕೆಲವೊಂದು ರಿಯಾಯಿತಿಗಳನ್ನು ನೀಡುವುದರೊಂದಿಗೆ ಪಾರ್ಕಿಂಗ್ ವಸೂಲಿ ಮಾಡುವವರೇ, ವಾಹನಗಳ ಸಂಪೂರ್ಣ ಜವಾಬ್ದಾರಿ ಹೊತ್ತು, ಕಾವಲುಗಾರರನ್ನು ನೇಮಿಸಬೇಕು. ಅರಣ್ಯ ಇಲಾಖೆಯ ಜಾಗದಲ್ಲಿ ಇತರರು ಹಣ ಸಂಗ್ರಹಿಸುವಂತಿಲ್ಲ. ಆದರೆ, ಕೂಟಗಲ್‌ನಲ್ಲಿ ಈ ನಿಯಮಗಳಿಗೆ ಎಳ್ಳು ನೀರು ಬಿಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಖಾಸಗಿ ಟ್ರಸ್ಟ್‌ ಹಣ ವಸೂಲಿ ಮಾಡುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳ ಕೃಪಾರ್ಶಿವಾದ ಇದೆ ಎನ್ನಲಾಗಿದೆ. ಇದು ಸರಕಾರಿ ಟೆಂಡರ್ ಸಹ ಆಗಿಲ್ಲ. ಇಲ್ಲಿ ಕಾವಲುಗಾರರು ಇಲ್ಲ. ಕಾಸು ಕೊಟ್ಟು, ಗಾಡಿ ಕಳುವಾದರೂ ಕೇಳುವವರಿಲ್ಲ ಎಂಬಂತಾಗಿದೆ.

ಸಿನಿಮಾ ಚಿತ್ರಿಕರಣಕ್ಕೆ ಬರುವವರು ಅರಣ್ಯ ಇಲಾಖೆಗೆ ಶುಲ್ಕ ಕಟ್ಟಿ, ಸರಕಾರಿ ಅನುಮತಿ ಪಡೆದರೂ, ಪಾರ್ಕಿಂಗ್ ಶುಲ್ಕದೊಂದಿಗೆ ಈ ಟ್ರಸ್ಟ್‌ಗೆ ಹಣವನ್ನು ನೀಡಬೇಕಿದೆ ಎಂಬ ಆರೋಪ ಮತ್ತೊಂದೆಡೆ ಕೇಳಿಬಂದಿದೆ. ಪಾರ್ಕಿಂಗ್ ಶುಲ್ಕ ಕಟ್ಟಿದ ಬಳಿಕ ಕೆಲ ಬೈಕ್ ರೇಸರ್‌ಗಳು ಬೆಟ್ಟದ ಮೇಲೆ ರೇಸ್ ಮಾಡುತ್ತಿದ್ದು, ಕುಡುಕರ ಅಡ್ಡೆಯಾಗಿ ಈ ಸ್ಥಳ ಬದಲಾಗಿದೆ.

ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಟ್ರಸ್ಟ್ ಹೆಸರಿನಲ್ಲಿ ವಸೂಲಿ ಮಾಡುವಂತಿಲ್ಲ. ಇದು ಕಾನೂನು ಬಾಹಿರ ಕೆಲಸ. ಎರಡು ಮೂರು ಬಾರಿ ಎಚ್ಚರಿಕೆ ನೀಡಲಾಗಿದೆ. ಎಚ್ಚರಿಕೆ ನೀಡಿದ 2 ದಿನ ಸುಮ್ಮನಾಗುವ ಸ್ಥಳೀಯರು ಮತ್ತೆ ಪಾರ್ಕಿಂಗ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ವಶಕ್ಕೆ ಪಡೆಯಲು ಹೋದರೆ, ರಾಜಕೀಯ ಪ್ರಭಾವ ಅಡ್ಡ ಬರುತ್ತದೆ ಎಂದು ರಾಮನಗರ ಆರ್​ಎಫ್​ಒ ಕಿರಣ್ ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದರು.

(ಪಾರ್ಕಿಂಗ್​ ಶುಲ್ಕ ಸಂಗ್ರಹಿಸಲು) ಸರ್ಕಾರದ ನಿಯಮ ಇಲ್ಲ. ಆದರೆ, ಟ್ರಸ್ಟ್ ನೋಂದಾಯಿಸಿಕೊಂಡಿದ್ದೇವೆ. ದೇವಸ್ಥಾನದ ಅಭಿವೃದ್ಧಿಗಾಗಿ ಪಾರ್ಕಿಂಗ್ ಶುಲ್ಕವಾಗಿ ಹಣ ಪಡೆಯುತ್ತಿದ್ದೇವೆ. ಕುಡುಕರ ಹಾವಳಿ ನಿಯಂತ್ರಿಸಿದ್ದೆವೆ. ಕೆಲವೆಡೆ ಸಿಸಿಟಿವಿ ಕ್ಯಾಮೆರ ಅಳವಡಿಸಿದ್ದೇವೆ ಎಂದು ಬೆಟ್ಟದ ತಿಮ್ಮಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ದೇವರಾಜು ಹೇಳಿದರು.

ವರದಿ: ಪ್ರಶಾಂತ್ ಹುಲಿಕೆರೆ

ಇದನ್ನೂ ಓದಿ: ಡೆಹ್ರಾಡೂನ್​ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಮನಗರಕ್ಕೆ 33 ಪದಕ ತಂದುಕೊಟ್ಟ ಅಡ್ವೆಂಚರ್ ಅಕಾಡೆಮಿ
ಇದನ್ನೂ ಓದಿ: ರಾಮನಗರ ಜಿಲ್ಲಾ ಪೊಲೀಸರಿಂದ ವಿನೂತನ ಕಾರ್ಯಕ್ರಮ: ಬೀಟ್ ಪೊಲೀಸರಿಂದ ಗ್ರಾಮ ವಾಸ್ತವ್ಯ