ನಮ್ಮನ್ನು ಜೈಲಿಗೆ ಹಾಕಿಸುವ ಸಂಚು ನಡೆಯುತ್ತಿದೆ: ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 02, 2024 | 3:27 PM

ವಾಲ್ಮೀಕಿ ಹಗರಣಕ್ಕಿಂತ ಇದೀಗ ಮುಡಾ ಹಗರಣವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಾಕಂದ್ರೆ ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ. ಹೀಗಾಗಿ ಸಹಜವಾಗಿಯೇ ವಿಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬೆಂಗಳೂರು ಟು ಮೈಸೂರು ಪಾದಯಾತ್ರೆ ಕೈಗೊಂಡಿವೆ. ಇದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್​​ ಸಹ ಜನಾಂದೋಲ ಕಾರ್ಯಕ್ರಮ ನಡೆಸುತ್ತಿದ್ದು, ಬಿಡದಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಚರ್ಚೆಗೆ ಪಂಥಾಹ್ವಾನ ನೀಡಿದ್ದಾರೆ.

ನಮ್ಮನ್ನು ಜೈಲಿಗೆ ಹಾಕಿಸುವ ಸಂಚು ನಡೆಯುತ್ತಿದೆ: ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್
Follow us on

ರಾಮನಗರ, (ಆಗಸ್ಟ್. 02): ಮೈಸೂರು ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ಗೆ ಟಕ್ಕರ್ ಕೊಡಲು ಕಾಂಗ್ರೆಸ್​​ ಜನಾಂದೋಲ ಕಾರ್ಯಕ್ರಮ ನಡೆಸುತ್ತಿದ್ದು, ಇಂದು (ಆಗಸ್ಟ್ 02) ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದ ಜನಾಂದೋಲ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾವ ಬ್ಯಾಂಕ್‌ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳಿದ್ದಕ್ಕೆ ಉತ್ತರ ಕೊಡಬೇಕು. ನಮ್ಮನ್ನು ಜೈಲಿಗೆ ಹಾಕಿಸಬೇಕು ಎಂದು ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗೋಕೂ ರೆಡಿ ಇದ್ದೇನೆ. ನನ್ನಂತಹ ಬೇಕಾದಷ್ಟು ಜನ ಕಾಂಗ್ರೆಸ್​​ನಲ್ಲಿ ಹುಟ್ಟಿಕೊಳ್ಳುತ್ತಾರೆ. ವಿಜಯೇಂದ್ರ ವಿರುದ್ಧ ಎಲ್ಲಾ ಆರೋಪಗಳನ್ನು ಬಿಚ್ಚಿ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ಪಿತಾಮಹ ಅಂತಾ ಅಂದ್ರೆ ಏನು ಎಂದು ಹೇಳಲಿ. ವಿಜಯೇಂದ್ರ ಗಂಡಸಾಗಿದ್ರೆ ಹೇಳಲಿ, ಅವನಿಗೆ ಗೌರವ ಕೊಡುತ್ತೇನೆ. ಆದ್ರೆ, ಯಾವ ಭ್ರಷ್ಟಾಚಾರ, ಏನು ತನಿಖೆಯಾಗಿದೆ ಎಂದು ಹೇಳಬೇಕು. ಆಗ ಬಿ.ವೈ.ವಿಜಯೇಂದ್ರನನ್ನು ಪಾರ್ಟಿ ಅಧ್ಯಕ್ಷ ಎಂದು ಒಪ್ಪಿಕೊಳ್ಳುತ್ತೇನೆ. ನಾನು ಇಡಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೆ. ಸುಪ್ರೀಂಕೋರ್ಟ್​​ನಲ್ಲಿ ಇಡಿ ಕೇಸ್ ವಜಾ ಆಗಿದ್ದು ಗೊತ್ತಾ? ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಸಮಯ ಬರಲಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ವಿಜಯೇಂದ್ರ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ತೀರ್ಮಾನ

ವಿಜಯೇಂದ್ರಗೆ ಡಿಕೆಶಿ ಪಂಥಾಹ್ವಾನ

2028ಕ್ಕೆ ಮತ್ತೆ ಕಾಂಗ್ರೆಸ್ ಸದ್ದು ಮಾಡಲಿದೆ. ಮುಡಾ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿಲ್ಲ. ಹೇ.. ವಿಜಯೇಂದ್ರ ನಿನಗೆ ತಾಕತ್, ಧಮ್, ಧೈರ್ಯವಿದ್ದರೆ ಹೇಳು. ಅನೇಕ‌ ಗಣಿ ವಿಚಾರವಾಗಿ ಚರ್ಚೆ ಮಾಡುವುದಕ್ಕೆ ನಾನು‌ ಸಿದ್ಧ. ಮುಂದಿನ‌ ಅಸೆಂಬ್ಲಿಗಾದರೂ ಉತ್ತರ ಕೊಡಿ. ರಾಜ್ಯಕ್ಕೆ ಅನ್ಯಾಯ ಆಗಿದೆ. ನ್ಯಾಯ ಕೊಡಲಿಕ್ಕೆ ಡಿಕೆ ಸುರೇಶ್ ಹೋರಾಟ ಮಾಡಿದ್ರು. ಷಡ್ಯಂತ್ರ ಮಾಡಿ ಸೋಲಿಸಿದ್ರಿ. 2028ಕ್ಕೆ ಮತ್ತೆ ಕಾಂಗ್ರೆಸ್ ಸದ್ದು ಮಾಡಲಿದೆ. ಅಸೆಂಬ್ಲಿಗೆ ತಯಾರಾಗಿದ್ದೇನೆ. ಮುಂದಿನ‌ ಅಸೆಂಬ್ಲಿಗಾದ್ರೂ ಉತ್ತರ ಕೊಡಿ. ಎಷ್ಟು ಸಾವಿರ ಕೋಟಿ ಇದ್ದಾರೆಂದು ಬಯಲಿಗೆ ಎಳೆಯುತ್ತೇನೆ. ನಿಮ್ಮ‌ ಸೋದರನ ಬಳಿ ಮಾಹಿತಿ‌ ತರೆಸಿಕೊಳ್ಳಿ. ಅನೇಕ‌ ಮೈನಿಂಗ್ ಬಗ್ಗೆ‌ಚರ್ಚೆ ಮಾಡಲು ನಾನು‌ ಸಿದ್ದ ಎಂದು ವಿಜಯೇಂದ್ರಗೆ ಪಂಥಾಹ್ವಾನ ನೀಡಿದರು.

ಮುಡಾ ಹಗರಣ ಹೊರಬರಲು ಕಾಂಗ್ರೆಸ್ ಕಾರಣ ಎಂದಿದ್ದೀಯಾ? ಕುಮ್ಮಕ್ಕು ಕೊಟ್ಟ ಕಾಂಗ್ರೆಸ್ ನಾಯಕನನ್ನು ಬಹಿರಂಗವಾಗಿ ಹೇಳು. ನಿನಗೆ ತಾಕತ್, ಧೈರ್ಯವಿದ್ದರೆ ಯಾರು ಎಂದು ಬಹಿರಂಗವಾಗಿ ಹೇಳು ಎಂದು ವಿಜಯೇಂದ್ರ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್, ನಿಮ್ಮ ತಂದೆಗೆ ಕಾಂಗ್ರೆಸ್ ಸರ್ಕಾರ ಭಿಕ್ಷೆ ಕೊಟ್ಟಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಪ್ರಸ್ತಾಪಿಸಿದರು.

ಸಿಎಂ ಆಸ್ತಿಯನ್ನು ಹುಡುಕಿ ಮಂತ್ರಿಗಳಿಗೆ ಕೊಟ್ಟಿದ್ದೀರಿ

ದೇವೇಗೌಡರು ನನ್ನ ಪುಣ್ಯ ಭೂಮಿ, ಕರ್ಮಭೂಮಿ‌ ಎಂದಿದ್ದರು. ಕುಮಾರಸ್ವಾಮಿ ತಂದೆ ಈ ಜಿಲ್ಲೆಯಿಂದ‌ ಪ್ರಧಾನಿ, ಮುಖ್ಯಮಂತ್ರಿ ಆಗಿದ್ದರು.ಕುಮಾರಸ್ವಾಮಿ ಪತ್ನಿ ಈ‌ ಜಿಲ್ಲೆಯಿಂದ‌ ಶಾಸಕಿಯಾಗಿದ್ದರು. ಆದ್ರೆ, ಪಾದಯಾತ್ರೆಯಲ್ಲಿ‌ ಜೆಡಿಎಸ್ ಪಕ್ಷದ ಒಂದು ಬಾವುಟವೂ ಇಲ್ಲ. ಕುದುರೆ ಎಷ್ಟೇ ಚೆನ್ನಾಗಿದ್ದರೂ ಚಾಟಿ ಏಟು ಬೀಳದೇ ಇರುವುದಿಲ್ಲ ಎಂದು ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ನಿನ್ನೆ ತಮ್ಮ ಭಾಷಣದಲ್ಲಿ ಏನು ಹೇಳಿದ್ರಿ? ನಾನು ಈ ಪಾದಯಾತ್ರೆಯನ್ನ ಮಾಡಲ್ಲ, ನನ್ನ ಕರ್ಮ ಭೂಮಿ ಎಂದು ಹೇಳೋ‌ ಧೈರ್ಯ ಇಲ್ಲ. ತಾವು‌ ಕೇಂದ್ರದ ಸಚಿವರನ್ನ ಭೇಟಿ ಮಾಡಿ ಏನೇನು‌ ಪಟ್ಟಿ ಕೊಟ್ಟಿದ್ದೀರಿ ಗೊತ್ತು. ಸಿಎಂ ಹಾಗೂ ನನ್ನ ಆಸ್ತಿಯನ್ನೆಲ್ಲ ಹುಡುಕಿ‌ ಹುಡುಕಿ‌ ಕೊಟ್ಟಿದ್ದೀರಿ ಎಂದು ಹೊಸ ಬಾಂಬ್ ಸಿಡಿಸಿದರು.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Fri, 2 August 24