ಆರೋಪಿ ಪುನೀತ್ ಕೆರೆಹಳ್ಳಿ ತಂಡವನ್ನು ರಾಜಸ್ಥಾನದಿಂದ ರಾಮನಗರಕ್ಕೆ ಕರೆತರಲು ಪೊಲೀಸ್ ಸಿದ್ಧತೆ
ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ರಾಜಸ್ಥಾನದಲ್ಲಿ ಸಿಕ್ಕಿಬಿದ್ದು, ಕೆರೆಹಳ್ಳಿ ಸೇರಿದಂತೆ ಐವರು ಆರೋಪಿಗಳನ್ನು ರಾಮನಗರಕ್ಕೆ ಕರೆತರಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರಾಮನಗರ: ಗೋವು ಸಾಗಾಣಿಕೆ ವೇಳೆ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಸಾತನೂರು ಪೊಲೀಸರು (Sathanoor Police) ಕಾರ್ಯಾಚರಣೆ ನಡೆಸಿ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ಹಾಗೂ ತಂಡವನ್ನು ರಾಜಸ್ಥಾನದ ಬನಸ್ವಾರ ಬಳಿ ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯವು ಮೂರು ದಿನಗಳ ಟ್ರಾನ್ಸಿಟ್ ವಾರಂಟ್ ನೀಡಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ನ ಉನ್ನತ ಮೂಲವೊಂದು ತಿಳಿಸಿದೆ. ಆರೋಪಿಗಳನ್ನು ಕಾನೂನು ಪ್ರಕಾರ ರಾಮನಗರಕ್ಕೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಗೋ ಸಾಗಾಟ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು: ರಾಜಸ್ಥಾನದಲ್ಲಿ ಪುನೀತ್ ಕೆರೆಹಳ್ಳಿ ಬಂಧನ
ಆರೋಪಿಗಳನ್ನು ರಾಜಸ್ಥಾನದಿಂದ ಕರೆತರಲು ಟಿಕೆಟ್ ಬುಕ್ ಮಾಡಲು ಪ್ರಯತ್ನಗಳು ನಡೆದಿವೆ. ಟ್ರಾನ್ಸಿಟ್ ವಾರಂಟ್ ಮೂರು ದಿನಗಳವರೆಗೆ ಇರುವುದರಿಂದ ಎಲ್ಲಾ ಆರೋಪಿಗಳನ್ನು ಗುರುವಾರ ಅಥವಾ ಶುಕ್ರವಾರ ಬೆಳಿಗ್ಗೆ ರಾಮನಗರಕ್ಕೆ ಕರೆತರಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ನ್ಯೂಸ್9ಗೆ ತಿಳಿಸಿದ್ದಾರೆ.
ಆರೋಪಿಗಳನ್ನು ರಾಮನಗರಕ್ಕೆ ಕರೆತಂದ ನಂತರ ದೂರು ದಾಖಲಾಗಿರುವ ಸಾತನೂರು ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಬಳಿಕ ತನಿಖೆಗಾಗಿ ಆರೋಪಿಗಳನ್ನು ನಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಲಯಕ್ಕೆ ಮನವಿ ಮಾಡುತ್ತೇವೆ. ಆದ್ರೆ, ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹವವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದು, ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಷ್ ಪಾಷ (Idrish Pasha)ಮೃತ ದೇಹ ಘಟನೆ ನಡೆದ 200 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ ಗಿರಿ ಮಾಡಿದ್ದು ಇದ್ರಿಷ್ ಪಾಷಾ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3 ಎಫ್‍ಐಆರ್ ದಾಖಲಾಗಿತ್ತು. ಮೃತನ ಸಹೋದರನ ದೂರಿನಂತೆ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಹಾಗೂ ಇತರೆ ಆರೋಪಿಗಳು ನಾಪತ್ತೆಯಾಗಿದ್ದರು. ಸಾತನೂರು ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬುಧವಾರ ರಾಜಸ್ಥಾನದಲ್ಲಿ ಬಂಧಿಸಿದ್ದರು. ಆರೋಪಿಗಳಾದ ಪುನೀತ್ ಕೆರೆಹಳ್ಳಿ(ಎ1), ಗೋಪಿ, ಪವನ್ ಕುಮಾರ್, ಪಿಲ್ಲಿಂಗ್ ಅಂಬಿಗರ್, ಸುರೇಶ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಇದೀಗ ಅವರನ್ನು ರಾಜಸ್ಥಾನದಿಂದ ರಾಮನಗರಕ್ಕೆ ಕರೆತರಲು ಪೊಲೀಸರು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.
Published On - 3:29 pm, Thu, 6 April 23