ರಾಮನಗರ: ಕಾಡಾನೆಯ ರಹಸ್ಯವಾಗಿ ಮಣ್ಣು ಮಾಡಿದ್ದ ಕೋಡಿಹಳ್ಳಿ ರೈತ!
ರೈತ ನಂಜೇಗೌಡ ದಂತಕ್ಕಾಗಿ ಆನೆಯನ್ನು ಸಾಯಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾಡಾನೆಯ ದಂತಗಳನ್ನು ಬೇರ್ಪಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂಜೇಗೌಡ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ರಾಮನಗರ, ಡಿಸೆಂಬರ್ 6: ಕಾಡಾನೆಯ ಕಾಟದಿಂದ (Wild Elephant) ಬಚಾವಾಗಲು ಅಕ್ರಮವಾಗಿ ತೋಟಕ್ಕೆ ವಿದ್ಯುತ್ ತಂತಿ ಹಾಕಿದ್ದ ರೈತರೊಬ್ಬರು, ತಂತಿ ಸ್ಪರ್ಶಿಸಿ ಮೃತಪಟ್ಟ ಆನೆಯನ್ನು ರಹಸ್ಯವಾಗಿ ಹೂತು ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಮನಗರ (Ramanagara) ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಇದೀಗ ಮೂರು ದಿನಗಳ ಬಳಿಕ ಆನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊರ ತೆಗೆದಿದ್ದಾರೆ. ಆದರೆ, ಅಷ್ಟರಲ್ಲಿ ಆರೋಪಿ ರೈತ ನಾಪತ್ತೆಯಾಗಿದ್ದಾರೆ.
ರೈತ ನಂಜೇಗೌಡ ಎಂಬವರು ಕಾಡಾನೆ ಹಾವಳಿಯಿಂದ ತೋಟವನ್ನು ರಕ್ಷಿಸಲು ಅಕ್ರಮವಾಗಿ ತೋಟದ ಸುತ್ತ ವಿದ್ಯುತ್ ತಂತಿ ಹಾಕಿದ್ದರು. ಇದನ್ನು ಸ್ಪರ್ಶಿಸಿ 16 ವರ್ಷದ ಗಂಡಾನೆ ಮೃತಪಟ್ಟಿತ್ತು. ಅದನ್ನು ಯಾರಿಗೂ ಗೊತ್ತಾಗದಂತೆ ನಂಜೇಗೌಡ ಹೂತುಹಾಕಿದ್ದರು. ಈ ಕುರಿತು ಸುಳಿವು ದೊರೆತ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಹಿತ ಸ್ಥಳಕ್ಕೆ ತೆರಳಿ ಕಾಡಾನೆ ಕಳೇಬರ ಹೊರ ತೆಗೆದಿದ್ದಾರೆ.
ರೈತ ನಂಜೇಗೌಡ ದಂತಕ್ಕಾಗಿ ಆನೆಯನ್ನು ಸಾಯಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾಡಾನೆಯ ದಂತಗಳನ್ನು ಬೇರ್ಪಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂಜೇಗೌಡ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಆದರೆ ಇದೀಗ ಕೋಡಿಹಳ್ಳಿ ನಿವಾಸಿ ನಂಜೇಗೌಡ ನಾಪತ್ತೆಯಾಗಿದ್ದಾರೆ.
ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ರೈತರನ್ನು ಕಂಗಾಲಾಗಿಸಿದೆ. ಹಲವೆಡೆ ಕಾಡಾನೆ ಸೆರೆ ಕಾರ್ಯ ಪ್ರಗತಿಯಲ್ಲಿದ್ದರೂ ಮಾನವ – ಕಾಡುಪ್ರಾಣಿ ನಡುವಣ ಸಂಘರ್ಷ ಹತೋಟಿಗೆ ತರುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ.
ಇದನ್ನೂ ಓದಿ: ಅನುಮಾನ ಉಳಿಸಿಯೇ ಆನೆ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ…!
ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟ ಸಂದರ್ಭದಲ್ಲೇ ರಾಮನಗರದಲ್ಲಿ ಕಾಡಾನೆಯ ಹೂತುಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಕಾಡಾನೆ ಸೆರೆ ಕಾರ್ಯಾಚರಣೆಗೆ ಸಮರ್ಥವಾಗಿರುವ ಸಾಕಷ್ಟು ಸಾಕಾನೆಗಳು ತಮ್ಮ ಬಳಿ ಇಲ್ಲ. ಹೀಗಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ