ರಾಮನಗರ, (ಮಾರ್ಚ್ 05): ರಾಮನಗರದಲ್ಲಿ (Ramanagara) 40 ವಕೀಲರ(lawyers) ವಿರುದ್ಧ ದೂರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜೂರು ಠಾಣೆ PSI ತನ್ವೀರ್ ಹುಸೇನ್ ಅಮಾನತು ಆದೇಶ ತೆರವು ಮಾಡಲಾಗಿದೆ. ವಕೀಲರ ವಿರುದ್ಧ ಪಿಎಸ್ಐ ಕೇಸ್ ಹಾಕಿರುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಕ್ಲೀನ್ಚಿಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಐಜೂರು ಠಾಣೆ PSI ತನ್ವೀರ್ ಹುಸೇನ್ ಅಮಾನತು ರದ್ದುಗೊಳಿಸಿ ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಹೀಗಾಗಿ PSI ತನ್ವೀರ್ ಹುಸೇನ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಕೀಲರ ವಿರುದ್ಧ ಪಿಎಸ್ಐ ಕೇಸ್ ಹಾಕಿದ್ದು ತಪ್ಪಿಲ್ಲವೆಂದು ವರದಿಯಲ್ಲಿ ಗೊತ್ತಾಗಿದೆ. ಪ್ರಕರಣದಲ್ಲಿ ಬಾಹ್ಯ ಒತ್ತಡವಿಲ್ಲದೆ PSI ತನ್ವೀರ್ ಹುಸೇನ್ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಸಮುದಾಯದ ಪರ ಒಲವು ತೋರದೆ ಕಾರ್ಯನಿರ್ವಹಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ತಡರಾತ್ರಿವರೆಗೂ ವಕೀಲರ ಪ್ರತಿಭಟನೆ, ಐಜೂರು ಠಾಣೆ ಪಿಎಸ್ಐ ತನ್ವೀರ್ ಹುಸೇನ್ ಸಸ್ಪೆಂಡ್
ರಾಮನಗರದಲ್ಲಿ (Ramanagara) 40 ಮಂದಿ ವಕೀಲರ ವಿರುದ್ಧ ಪಿಎಸ್ಐ ತನ್ವೀರ್ ಎಫ್ಐಆರ್ ದಾಖಲಿಸಿದ್ದು ರಾಜಕೀಯ ಆಯಾಮ ಪಡೆದುಕೊಂಡಿತ್ತು. ವಕೀಲರ ಪ್ರತಿಭಟನೆಗೆ ಬಿಜೆಪಿ, ಜೆಡಿಎಸ್ ಬೆಂಬಲಿಸಿದ್ದವು. ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದ್ದ ವಕೀಲರ ಪ್ರತಿಟನಾ ಸ್ಥಳಕ್ಕೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಬೆಂಬಲಿಸಿದ್ದರು.
ಬಳಿಕ ಈ ಬಗ್ಗೆ ವಿಪಕ್ಷ ನಾಯಕರು ಬಜೆಟ್ ಅಧಿವೇಶನದಲ್ಲೂ ಪ್ರಸ್ತಾಪಿಸಿ ಪಿಎಸ್ಐ ಅಮಾನತಿಗೆ ಬಿಗಿಪಟ್ಟು ಹಿಡಿದಿದ್ದರು. ಅಲ್ಲದೇ ಸದನದ ಬಾವಿಗಿಳಿದು ಧರಣಿ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ವಕೀಲರ ಹೋರಾಟದಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುವ ಮೂಲಕ ಆರೋಪ ಪ್ರತ್ಯಾರೋಪಗಳ ನಡುವೆ ಸರ್ಕಾರ ಪಿಎಸ್ ಐ ಸಸ್ಪೆಂಡ್ ಮಾಡುವ ಮೂಲಕ ಇಬ್ಬರ ನಡುವಿನ ಜಟಾಪಟಿಗೆ ಇತೀಶ್ರಿ ಹಾಡಿತ್ತು.
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಚಾಂದ್ ಪಾಷಾ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. ಫೆಬ್ರವರಿ 3ರಂದು ಈ ಪೋಸ್ಟ್ ಮಾಡಲಾಗಿತ್ತು. ಇದು ಸ್ಥಳೀಯ ಹಿಂದೂ ಪರ ಸಂಘಟನೆಗಳ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಷಾ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳ ಮುಖಂಡರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲರ ಸಂಘವನ್ನು ಆಗ್ರಹಿಸಿದ್ದರು.
ಫೆಬ್ರವರಿ 4ರಂದು ಹಿಂದೂ ಸಂಘಟನೆಯೊಂದರ ಮುಖಂಡ ಶಿವಾನಂದ ಎಂಬವರು ಚಾಂದ್ ಪಾಷಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪಾಷಾ ಅವರ ಕೆಲವು ಮಂದಿ ಬೆಂಬಲಿಗರು ವಕೀಲರ ಸಂಘದ ಕಚೇರಿಗೆ ತೆರಳಿ ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಸುಮಾರು 11 ಮಂದಿ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ನಿಂದನೆ ಮಾಡಿದ್ದಾರೆ ಎಂದು ಪಾಷಾ ಬೆಂಬಲಿಗರು ಆರೋಪಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಪಾಷಾ ಬೆಂಬಲಿಗರು ಪೊಲೀಸ್ ಠಾಣೆಗೆ ತೆರಳಿ ವಕೀಲರ ಸಂಘದ ವಿರುದ್ಧ ದೂರು ನೀಡಿದ್ದರು. ಇದನ್ನು ಸ್ವೀಕರಿಸಿದ ಪಿಎಸ್ಐ ತನ್ವೀರ್ 40 ಮಂದಿ ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Tue, 5 March 24