ರಾಮನಗರದಲ್ಲಿ ತಡರಾತ್ರಿವರೆಗೂ ವಕೀಲರ ಪ್ರತಿಭಟನೆ, ಐಜೂರು ಠಾಣೆ ಪಿಎಸ್​​ಐ ತನ್ವೀರ್ ಹುಸೇನ್ ಸಸ್ಪೆಂಡ್​​

ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 40 ವಕೀಲರ ವಿರುದ್ಧ ಎಫ್​ಐಆರ್ ದಾಖಲು ವಿಚಾರ ಸಂಬಂಧ ರಾಮನಗರದ ಐಜೂರು ಠಾಣೆ ಪಿಎಸ್​​ಐ ಸಸ್ಪೆಂಡ್​​ ಮಾಡಲಾಗಿದೆ.

ರಾಮನಗರದಲ್ಲಿ ತಡರಾತ್ರಿವರೆಗೂ ವಕೀಲರ ಪ್ರತಿಭಟನೆ, ಐಜೂರು ಠಾಣೆ ಪಿಎಸ್​​ಐ ತನ್ವೀರ್ ಹುಸೇನ್ ಸಸ್ಪೆಂಡ್​​
ಐಜೂರು ಠಾಣೆ ಪಿಎಸ್​​ಐ ತನ್ವೀರ್ ಹುಸೇನ್ ಸಸ್ಪೆಂಡ್​​
Follow us
| Updated By: ಆಯೇಷಾ ಬಾನು

Updated on:Feb 21, 2024 | 10:38 AM

ರಾಮನಗರ, ಫೆ.21: 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನ ಖಂಡಿಸಿ ವಕೀಲರು ನಡೆಸುತ್ತಿರುವ ಪ್ರತಿಭಟನೆ (Ramanagar Lawyers Protest) ಇಡೀ ಜಿಲ್ಲೆಯಲ್ಲಿ ಬೆಂಕಿ ಹತ್ತಿಸಿದೆ. ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ವಿಧಾನಸಭಾ ಕಲಾಪದಲ್ಲೂ ಚರ್ಚೆಯಾಗುತ್ತಿದೆ. ಇನ್ನು ಮತ್ತೊಂದೆಡೆ ಈ ಪ್ರಕರಣದಲ್ಲಿ ಮೇಜರ್ ಬೆಳವಣಿಗೆಯಾಗಿದ್ದು ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ (Tanveer Hussain) ಅಮಾನತು ಮಾಡಲಾಗಿದೆ.

ರಾಮನಗರದ 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆ ಪಿಎಸ್​ಐ ಆಗಿದ್ದ ತನ್ವೀರ್ ಹುಸೇನ್​ ಅವರು ಎಫ್​ಐಆರ್​ ದಾಖಲಿಸಿದ್ದರು. ಎಫ್​ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ (ಫೆ.19) ಪ್ರತಿಭಟನೆ ಆರಂಭಿಸಿದರು. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು. ಧರಣಿನಿರತ ವಕೀಲರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ, ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಸಾಥ್ ನೀಡಿದ್ದರು. ತಡ ರಾತ್ರಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ದರಣಿ ನಡೆಸುತ್ತಿದ್ದ ವಕೀಲರಿಗೆ ಕೈ ಜೋಡಿಸಿದ್ದರು. ಇದಾದ ಬಳಿಕ ಈ ವಿಚಾರ ದೊಡ್ಡ ಮಟ್ಟಿಗೆ ಚರ್ಚೆ ಆಗಲು ಆರಂಭವಾಯಿತು. ಈ ವಿಚಾರ ಸಂಬಂಧ ಜೆಡಿಎಸ್, ಬಿಜೆಪಿ ಸದಸ್ಯರು ಸರ್ಕಾರದ ಉತ್ತರಕ್ಕಾಗಿ ಒತ್ತಾಯಿಸಿದ್ದು ಇಂದು ವಿಧಾನಸಭೆಯಲ್ಲಿ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ವಕೀಲ ಚಾಂದ್ ಪಾಷಾ ವಿರುದ್ಧ ಕಠಿಣ ಕ್ರಮ‌ ತೆಗೆದುಕೊಳ್ಳುತ್ತೇವೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ಫೆ.19ರಂದು ಶುರುವಾದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ತಡರಾತ್ರಿ ಕೂಡ ಧರಣಿ ನಡೆದಿದೆ. ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ತಡರಾತ್ರಿ ವರೆಗೂ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಖುದ್ದು ವಕೀಲರಾದರೂ ರಾಮನಗರ ವಕೀಲರ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡದಿರುವುದು ಆಶ್ಚರ್ಯ: ಸಿಪಿ ಯೋಗೇಶ್ವರ್

ವಕೀಲರ ಆಕ್ರೋಶಕ್ಕೆ ಕಾರಣವೇನು?

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿ ಚಾನ್ ಪಾಷಾ ಎಂಬಾತ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ. ವಕೀಲ ಮತ್ತು ಎಸ್‌ಡಿಪಿಐ ಕಾರ್ಯಕರ್ತನೂ ಆಗಿರೋ ಚಾನ್ ಪಾಷಾ, ಫೇಸ್​ಬುಕ್​ನಲ್ಲಿ ನ್ಯಾಯಾಧೀಶರ ಆದೇಶವನ್ನೇ ಪ್ರಶ್ನಿಸಿ ಅವಾಚ್ಯ ಪದ ಬಳಸಿ ಪೋಸ್ಟ್ ಹಾಕಿದ್ದ. ಚಾನ್‌ ಪಾಷಾ ವಿರುದ್ಧ ದೂರು ದಾಖಲಾಗ್ತಿದ್ದಂತೆ ಫೇಸ್​ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದ. ಪೊಲೀಸರು ಚಾನ್ ಪಾಷಾನನ್ನು ಬಂಧಿಸಿದ್ರು.

ವಕೀಲ ಚಾನ್ ಪಾಷಾ ಮಾಡಿರೋ ಅವಹೇಳನಕಾರಿ ಪೋಸ್ಟ್ ವಿಚಾರ ಇಷ್ಟಕ್ಕೆ ಮುಗಿದಿಲ್ಲ. ಚಾನ್ ಪಾಷಾ ವಿರುದ್ಧ ವಕೀಲರ ಗುಂಪೊಂದು ರಾಮನಗರ ಜಿಲ್ಲಾ ವಕೀಲರ ಸಂಘಕ್ಕೆ ದೂರು ಕೊಟ್ಟಿತ್ತು. ನನ್ನ ವಿರುದ್ಧ ಕೊಟ್ಟಿರೋ ಸುಳ್ಳು ದೂರು ಅಂತಾ ಮನವರಿಕೆ ಮಾಡಲು ಚಾನ್ ಪಾಷಾ ತನ್ನ ಆಪ್ತರ ಜೊತೆಗೆ ವಕೀಲರ ಸಂಘದ ಕಚೇರಿಗೆ ತೆರಳಿದ್ದ ವೇಳೆ ಜಟಾಪಟಿ ನಡೆದಿದೆ. ಈ ವೇಳೆ ತನ್ನ ಹಾಗೂ ತನ್ನ ಜೊತೆ ಬಂದಿದ್ದವರ ಮೇಲೆ ಹಲ್ಲೆ ಮಾಡಿ, ಧಾರ್ಮಿಕವಾಗಿ ನಿಂದಿಸಿದ್ದಾರೆ ಅಂತಾ 40 ವಕೀಲರ ವಿರುದ್ಧ ರಾಮನಗರ ಠಾಣೆಗೆ ದೂರು ನೀಡಿದ್ರು. ಇದರಂತೆ ಬರೋಬ್ಬರಿ 40 ವಕೀಲರ ವಿರುದ್ಧ ರಾಮನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ವಕೀಲರ ಮೇಲೆ ಎಫ್​ಐಆರ್ ದಾಖಲಿಸಿರೋ ಪಿಎಸ್​ಐ ತನ್ವೀರ್ ಹುಸೇನ್ ಅಮಾನತು ಮಾಡುವಂತೆ ಪಟ್ಟು ಹಿಡಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸ್ತಿದ್ದರು.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:00 am, Wed, 21 February 24