ರಾಮನಗರ ವಕೀಲರ ಪ್ರತಿಭಟನೆ: ವಿವಾದದ ಕಿಡಿ ಹೊತ್ತಿಕೊಂಡಿದ್ದೆಲ್ಲಿಂದ? ಇಲ್ಲಿದೆ ಪೂರ್ಣ ವಿವರ
ರಾಮನಗರ ವಕೀಲರ ಪ್ರತಿಭಟನೆ ದೊಡ್ಡ ಮಟ್ಟಕ್ಕೆ ತಿರುಗಿದ್ದೇಕೆ? ವಕೀಲರ ವಿರುದ್ಧ ಎಫ್ಐಆರ್ಗೆ ಕಾರಣವೇನು? ಅಷ್ಟಕ್ಕೂ ಚಾಂದ್ ಪಾಷಾ ಯಾರು? ವಕೀಲರ ಪ್ರತಿಭಟನೆಗೆ ರಾಜಕೀಯ ನಾಯಕರ ಕುಮ್ಮಕ್ಕು ಇದೆಯೇ? ಹೆಚ್ಡಿ ಕುಮಾರಸ್ವಾಮಿ, ಆರ್ ಅಶೋಕ ಸಾಥ್ ನೀಡಿದ್ದೇಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ರಾಮನಗರ, ಫೆಬ್ರವರಿ 20: ರಾಮನಗರದಲ್ಲಿ (Ramanagara) 40 ಮಂದಿ ವಕೀಲರ ವಿರುದ್ಧ ಪಿಎಸ್ಐ ತನ್ವೀರ್ ಎಫ್ಐಆರ್ ದಾಖಲಿಸಿರುವ ವಿಚಾರವೀಗ ರಾಜಕೀಯ ಆಯಾಮ ಪಡೆದುಕೊಂಡಿದೆ. ಎಫ್ಐಆರ್ ರದ್ದು ಮಾಡುವಂತೆ ಆಗ್ರಹಿಸಿ ವಕೀಲರು ಸೋಮವಾರ ಆರಂಭಿಸಿದ್ದ ಧರಣಿ (Lawyer’s Protest) ತಡರಾತ್ರಿಯಾದರೂ ಮುಂದುವರೆಯಿತು. ಧರಣಿನಿರತ ವಕೀಲರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಸಾಥ್ ನೀಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. ಉಭಯ ನಾಯಕರು ರಾಮನಗರದ ಐಜೂರು ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರಿಗೆ ಬೆಂಬಲ ನೀಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಎಲ್ಲ ಬೆಳವಣಿಗೆ ಆರಂಭವಾಗಿದ್ದು ಎಸ್ಡಿಪಿಐ ಕಾರ್ಯಕರ್ತರೂ ಆಗಿರುವ ವಕೀಲ ಚಾಂದ್ ಪಾಷಾ ಎಂಬವರು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ. ಹಾಗಾದರೆ, ಇದು ಯಾವಾಗ ಆರಂಭವಾಯಿತು? ನಂತರ ಏನೇನು ಬೆಳವಣಿಗೆಗಳಾದವು? ಈಗ ರಾಜಕೀಯ ತಿರುವು ಪಡೆದುಕೊಂಡಿದ್ದೇಕೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕಿಡಿ ಹೊತ್ತಿಸಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಚಾಂದ್ ಪಾಷಾ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. ಫೆಬ್ರವರಿ 3ರಂದು ಈ ಪೋಸ್ಟ್ ಮಾಡಲಾಗಿತ್ತು. ಇದು ಸ್ಥಳೀಯ ಹಿಂದೂ ಪರ ಸಂಘಟನೆಗಳ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಷಾ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳ ಮುಖಂಡರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲರ ಸಂಘವನ್ನು ಆಗ್ರಹಿಸಿದ್ದರು.
ಫೆಬ್ರವರಿ 4ರಂದು ಹಿಂದೂ ಸಂಘಟನೆಯೊಂದರ ಮುಖಂಡ ಶಿವಾನಂದ ಎಂಬವರು ಚಾಂದ್ ಪಾಷಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪಾಷಾ ಅವರ ಕೆಲವು ಮಂದಿ ಬೆಂಬಲಿಗರು ವಕೀಲರ ಸಂಘದ ಕಚೇರಿಗೆ ತೆರಳಿ ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಸುಮಾರು 11 ಮಂದಿ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ನಿಂದನೆ ಮಾಡಿದ್ದಾರೆ ಎಂದು ಪಾಷಾ ಬೆಂಬಲಿಗರು ಆರೋಪಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಪಾಷಾ ಬೆಂಬಲಿಗರು ಪೊಲೀಸ್ ಠಾಣೆಗೆ ತೆರಳಿ ವಕೀಲರ ಸಂಘದ ವಿರುದ್ಧ ದೂರು ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಪಿಎಸ್ಐ ತನ್ವೀರ್ 40 ಮಂದಿ ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.
ದಲಿತ ಸಂಘಟನೆಗಳಿಂದಲೂ ಕಿರಿಕ್
ಈ ಮಧ್ಯೆ, ದಲಿತ ಸಂಘಟನೆಗಳ ಕೆಲವು ಮುಖಂಡರು ಕೂಡ ಪಾಷಾ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಲು ವಕೀಲರ ಸಂಘದ ಕಚೇರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರ ವಿರುದ್ಧವೂ ಕೆಲವು ಮಂದಿ ವಕೀಲರು ಜಾತಿ ನಿಂದನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ದೂರು ನೀಡಲು ತೆರಳಿದಾಗ ಪಿಎಸ್ಐ ತನ್ವೀರ್ ದೂರು ಸ್ವೀಕರಿಸಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ತಿರುವು ಪಡೆದುಕೊಂಡ ರಾಮನಗರ ವಕೀಲರ ಪ್ರತಿಭಟನೆ: ಕುಮಾರಸ್ವಾಮಿ, ಅಶೋಕ ಸಾಥ್
ಈ ಎಲ್ಲ ಬೆಳವಣಿಗೆಗಳ ಮಧ್ಯೆ ವಕೀಲರ ಪ್ರತಿಭಟನೆ ಮುಂದುವರಿದಿದೆ. ರಾಮನಗರ ಡಿಸಿ ಕಚೇರಿ ಮುಂದೆ ವಕೀಲರ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದೆಡೆ ದಲಿತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ಕೂಡ ನಡೆಯುತ್ತಿದೆ. ಐಜೂರು ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಱಲಿ ನಡೆಯುತ್ತಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. 200ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.
ನಾಳೆ ಬೆಂಗಳೂರು ಚಲೊಗೆ ಭರ್ಜರಿ ಸಿದ್ಧತೆ
40 ಜನ ವಕೀಲರ ಮೇಲೆ ಎಫ್ಐಆರ್ ದಾಖಲಿಸಿರುವ ವಿಚಾರವಾಗಿ ಬುಧವಾರ ಬೆಂಗಳೂರು ಚಲೊಗೆ ಭರ್ಜರಿ ಸಿದ್ಧತೆ ನಡೆದಿದೆ. ಈ ಬಗ್ಗೆ ರಾಜ್ಯದ ಎಲ್ಲಾ ವಕೀಲರ ಸಂಘಕ್ಕೂ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ನಿಂದ ನಿರ್ದೇಶನ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿಧಾನಸೌಧ ಮುತ್ತಿಗೆಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಒಬ್ಬ ವಕೀಲನಾಗಿದ್ದರೂ ವಕೀಲರ ಮೇಲೆ ಅನ್ಯಾಯ ಎಸಗಲಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ.