ಕೆಸರುಗದ್ದೆಯಂತಾದ ರಸ್ತೆಗಳು; ಪೈರು ನಾಟಿ ಮಾಡಿ ಆಕ್ರೋಶ ಹೊರ ಹಾಕಿದ ಸಾದರಹಳ್ಳಿ ಗ್ರಾಮಸ್ಥರು
ಕೆಸರುಗದ್ದೆಯಂತಾದ ರಸ್ತೆಯಲ್ಲಿ ಪೈರು ನಾಟಿ ಮಾಡಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಹಾಗೂ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.
ರಾಮನಗರ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿದೆ. ಒಂದಿಲ್ಲೊಂದು ಸಮಸ್ಯೆಯಿಂದ ಜನ ದಿನ ಕಳೆಯುವಂತಾಗಿದೆ. ಆದ್ರೆ ರಾಮನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಕೆಸರುಗದ್ದೆಯಂತಾಗಿದ್ದು ಗ್ರಾಮಸ್ಥರು ವಿಭಿನ್ನವಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕೆಸರುಗದ್ದೆಯಂತಾದ ರಸ್ತೆಯಲ್ಲಿ ಪೈರು ನಾಟಿ ಮಾಡಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಹಾಗೂ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಮಸ್ಥ ಎಸ್ ಪಿ ಬಾಲಸುಬ್ರಮಣ್ಯ, ಸುಮಾರು 250 ಮನೆಗಳಿರುವ ಗ್ರಾಮ ಇದು. ಕಳೆದ ಮೂರು ವರ್ಷದಿಂದ ಗ್ರಾಮದಲ್ಲಿ ಇದೇ ಪರಿಸ್ಥಿತಿ ಇದೆ. ಮಳೆ ಬಂದ್ರೆ ಸಾಕು ಮನೆಯಿಂದ ಹೊರಕ್ಕೆ ಕಾಲಿಡೋಕೆ ಆಗಲ್ಲ. ಸುತ್ತಾಡೋಕೆ ಆಗಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧ ಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಸಕರುಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಇದಕ್ಕೆ ಪರಿಹಾರ ಸಿಗಬೇಕು. ರಸ್ತೆ ದುರಸ್ತಿ ಮಾಡಬೇಕು ಎಂದು ಹೇಳಿದ್ರು.
ಮಳೆ ಬಂದ್ರೆ ಸಾಕು ಈ ಊರಿನ ಜನ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮೂರು ವರ್ಷದಿಂದ ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸಿ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಲ್ಲಿ ನಿಂತ ನೀರು ಕೆಸರಿನಿಂದ ಸುಳ್ಳೆಗಳ ಕಾಟ ಕೂಡ ಹೆಚ್ಚಾಗಿದ್ದು ರೋಗಗಳು ಬರುವ ಆತಂಕದಲ್ಲಿ ಇಲ್ಲಿನ ಜನ ಇದ್ದಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: ಕೆರೆಯಂತಾದ ಅಂಜನಾಪುರ ಮುಖ್ಯರಸ್ತೆಯಲ್ಲಿ ತೆಪ್ಪ ಬಿಟ್ಟು ಪ್ರತಿಭಟನೆ! ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಸ್ಥಳೀಯರು