ರಾಮನಗರ: ಮರದಲ್ಲಿ ಜೋತು ಬಿದ್ದಿರುವ ಬಗೆ ಬಗೆಯ ಮಾವಿನ ಕಾಯಿಗಳು. ಮಾವಿನ(Mango) ಕಾಯಿಗಳನ್ನ ಕಟಾವು ಮಾಡುತ್ತಿರುವ ಜನ. ಮಾರುಕಟ್ಟೆಗೆ ಮಾವು ಇಳಿಸುತ್ತಿರುವ ಮಾವು ಬೆಳೆಗಾರರು. ಬಗೆ ಬಗೆಯ ಮಾವನ್ನ ಖರೀದಿ ಮಾಡುತ್ತಿರುವ ವ್ಯಾಪಾರಸ್ಥರು. ಅಂದಹಾಗೆ ಇಂತಹ ದೃಶ್ಯಗಳು ಕಂಡು ಬಂದಿದ್ದು ರಾಮನಗರದಲ್ಲಿ. ಹೌದು ಹಣ್ಣುಗಳ ರಾಜ, ಮಾವು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಗೆ ಬಗೆಯ ಮಾವು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಆದರೆ ಈ ಬಾರಿ ಮಾವಿನ ಹಂಗಾಮು ರೈತರಿಗೆ ಕಹಿಯಾಗಿದ್ದು, ಇತ್ತ ಉತ್ತಮ ಇಳಿವರಿಯೂ ಇಲ್ಲದೆ, ಅತ್ತ ಸೂಕ್ತ ಬೆಲೆಯೂ ಸಿಗದೇ ಜಿಲ್ಲೆಯ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಮೊದಲಿಗೆ ಮಾವು ಮಾರುಕಟ್ಟೆಗೆ ಬರುವುದು ರಾಮನಗರದಿಂದ. ಹೀಗಾಗಿ ಸಹಜವಾಗಿಯೇ ಆರಂಭದಲ್ಲಿ ಜಿಲ್ಲೆಯ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ. ಆದರೆ ಈ ವರ್ಷ ಏಪ್ರಿಲ್ ಮೊದಲ ವಾರದಲ್ಲೇ ಧಾರಣೆ ಕುಸಿದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಬದಾಮಿ ಮಾವು ಪ್ರತಿ ಕೆ.ಜಿ.ಗೆ 150 ರಿಂದ200 ರೂ ರವರೆಗೂ ಬೆಲೆ ಇತ್ತು. ಆದರೆ ಈಗ ಕೆ.ಜಿ.ಗೆ 50ರಿಂದ60ರವರೆಗೆ ಇಳಿದಿದೆ. ಉಳಿದ ತಳಿಯ ಮಾವಿನ ಬೆಲೆ ಸಹ ಕುಸಿಯುತ್ತಿದೆ. ಇದು ಜಿಲ್ಲೆಯ ಮಾವು ಬೆಳೆಗಾರರನ್ನ ಕಂಗಾಲಾಗುವಂತೆ ಮಾಡಿದೆ.
ಇದನ್ನೂ ಓದಿ:ಗೋಡಂಬಿ ಬೆಳೆ ಈಗ ಬಿಸಿಲುನಾಡು ಬೀದರ್ ಜಿಲ್ಲೆಗೂ ಕಾಲಿಟ್ಟಿದೆ! ರೈತರ ಪಾಲಿಗೆ ಹಣ ನೀಡುವ ATM ಯಂತ್ರವಾಗುವ ಲಕ್ಷಣಗಳಿವೆ
ಮಾವು ಬೆಳೆಯುವಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟರ್ ಪ್ರದೇಶಲ್ಲಿ ಮಾವು ಬೆಳೆಯನ್ನ ಬೆಳೆಯಲಾಗುತ್ತದೆ. ಪ್ರತಿವರ್ಷ ಸುಮಾರು 400ರಿಂದ 500 ಕೋಟಿಯ, ಒಂದೂವರೆ ಲಕ್ಷ ಮೆಟ್ರಿಕ್ ಟನ್ ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತದೆ. ಇನ್ನು ಜಿಲ್ಲೆಯಲ್ಲಿ ಬಾದಾಮಿ, ಸೆಂದೂರ, ಬೈಗನಪಲ್ಲಿ, ನೀಲಂ, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳನ್ನ ಬೆಳೆಯಲಾಗುತ್ತದೆ. ರಾಮನಗರ ಜಿಲ್ಲೆಯಿಂದಲೇ ಹೊರ ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ. ಪ್ರತಿವರ್ಷ ರಾಜ್ಯದ ಮಾರುಕಟ್ಟೆಗೆ ಜಿಲ್ಲೆಯ ಮಾವು ಮೊದಲು ಲಗ್ಗೆ ಇಡುವುದು. ಆದರೆ ಈ ಬಾರಿ ಮಾವು ಇಳಿವರಿಯಲ್ಲಿ ಸಾಕಷ್ಟು ಹಿನ್ನೆಡೆಯಾಗಿದೆ.
ಕಳೆದ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಉಂಟಾದ ಹವಾಮಾನ ವೈಪರಿತ್ಯದಿಂದ ಮಾವು ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಈ ಬಾರಿ ಮಾವು ಇಳುವರಿ ಅರ್ಧದಷ್ಟು ಕಡಿಮೆಯಾಗಿದ್ದು, ಕೇವಲ 60 ಸಾವಿರದಿಂದ 80 ಸಾವಿರ ಮೆಟ್ರಿಕ್ ಟನ್ ಬರುವ ನೀರಿಕ್ಷೆಯಿದೆ. ಇನ್ನು ಈ ವರ್ಷ ರಾಮನಗರ ಭಾಗದಲ್ಲಿ ಮಾವು ಎರಡೆರಡು ಬಾರಿ ಹೂ ಕಚ್ಚಿದ್ದು, ಇನ್ನೂ ಮರದಲ್ಲಿ ಈಚು ಕಾಯಿಗಳಿವೆ. ತೀವ್ರ ಬಿಸಿಲಿನಿಂದಾಗಿ ಕಾಯಿಗಳು ಬಲಿಯುತ್ತಿಲ್ಲ. ಮಾವು ವ್ಯಾಪಾರವು ಇಂದಿಗೂ ನಗದು ವಹಿವಾಟನ್ನೇ ಹೆಚ್ಚು ಅವಲಂಬಿಸಿದೆ. ಆದರೆ ಸದ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು ಎಲ್ಲೆಡೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಇದೆ. ಹಣ ವರ್ಗಾವಣೆ ಸಮಸ್ಯೆಯಿಂದಾಗಿ ಹೊರ ರಾಜ್ಯಗಳ ವರ್ತಕರು ಮಾವು ಖರೀದಿಗೆ ಹಿಂದೇಟು ಹಾಕುತ್ತಿರುವುದೂ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಒಟ್ಟಾರೆ ಉತ್ತಮ ಬೆಲೆ ನೀರಿಕ್ಷೆಯಲ್ಲಿ ಇದ್ದ ಜಿಲ್ಲೆಯ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಸಿಗದೇ ಕಂಗಲಾಗಿದ್ದಾರೆ. ಹಾಕಿದ ಬಂಡವಾಳವೂ ಸಿಗುವ ನಿರೀಕ್ಷೆಯಿಲ್ಲ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sun, 9 April 23