ಮೇಕೆದಾಟು ಪಾದಯಾತ್ರೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಯಾರಿ; ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡದಿರಲು ಸರ್ಕಾರ ನಿರ್ಧಾರ?

| Updated By: ganapathi bhat

Updated on: Jan 08, 2022 | 8:16 PM

ರಾಮನಗರ ಜಿಲ್ಲೆಯಲ್ಲಿ ಐಸಿಯುನಲ್ಲಿ ಒಬ್ಬ ರೋಗಿಯೂ ಇಲ್ಲ. ಜಿಲ್ಲೆಯಲ್ಲಿ ಕೊವಿಡ್‌ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದೆ. ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಸುಳ್ಳು ಲೆಕ್ಕ ಹೇಳುತ್ತಿದೆ. ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಯಾರಿ; ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡದಿರಲು ಸರ್ಕಾರ ನಿರ್ಧಾರ?
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ
Follow us on

ರಾಮನಗರ: ಮೇಕೆದಾಟು ಯೋಜನೆಗಾಗಿ ಭಾನುವಾರ ಕಾಂಗ್ರೆಸ್‌ನಿಂದ ಪಾದಯಾತ್ರೆ ವಿಚಾರವಾಗಿ ಕನಕಪುರದ ನಿವಾಸದಲ್ಲಿ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಪಾದಯಾತ್ರೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಪಾದಯಾತ್ರೆ ವಿರುದ್ಧ ಸರ್ಕಾರ ಕೈಗೊಂಡ ನಿರ್ಧಾರ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಪಾದಯಾತ್ರೆಯನ್ನು ಇಡೀ ರಾಜ್ಯದ ಜನತೆ ಬೆಂಬಲಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಐಸಿಯುನಲ್ಲಿ ಒಬ್ಬ ರೋಗಿಯೂ ಇಲ್ಲ. ಜಿಲ್ಲೆಯಲ್ಲಿ ಕೊವಿಡ್‌ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದೆ. ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಸುಳ್ಳು ಲೆಕ್ಕ ಹೇಳುತ್ತಿದೆ. ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶದಂತೆ ಕರ್ಫ್ಯೂ ಜಾರಿ ಮಾಡಿಲ್ಲ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ನಡೆಸಲಾಗುವುದು. 100ಕ್ಕೂ ಹೆಚ್ಚು ವೈದ್ಯರು ಪಾದಯಾತ್ರೆ ವೇಳೆ ಇರುತ್ತಾರೆ. ರಾಜ್ಯದ ರೈತರ ಹಿತಕ್ಕಾಗಿ ಯೋಜನೆ ಜಾರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮಾಸ್ಕ್‌ ಹಾಕಿಕೊಂಡು ನಾಳೆ ಪಾದಯಾತ್ರೆಯಲ್ಲಿ ಭಾಗಿಯಾಗಿ ಎಂದು ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಲು ನಟ ಶಿವರಾಜ್​ಕುಮಾರ್ ಸೇರಿ ಎಲ್ಲಾ ಚಿತ್ರರಂಗದವರಿಗೆ ಆಹ್ವಾನ ನೀಡಿದ್ದೇವೆ ಎಂದು ಕನಕಪುರದ ನಿವಾಸದಲ್ಲಿ ಸಭೆ ಬಳಿಕ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿದ್ರೆ ತಪ್ಪೇನು: ಸಿದ್ದರಾಮಯ್ಯ ಪ್ರಶ್ನೆ
ಕೊವಿಡ್‌ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ. ರಾಜಕಾರಣಕ್ಕಾಗಿ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿಲ್ಲ. ರೈತರ ಹಿತಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ವಿಳಂಬ ಮಾಡಿ ರಾಜ್ಯದ ಜನರಿಗೆ ಸರ್ಕಾರ ದ್ರೋಹ ಮಾಡ್ತಿದೆ. ಕಳೆದ ಎರಡೂವರೆ ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ರೂ ವಿಳಂಬ ಆಗುತ್ತಿದೆ. ಯೋಜನೆ ಆರಂಭ ಮಾಡಿದ್ದು ಕಾಂಗ್ರೆಸ್ ಪಕ್ಷ. ಎಂ.ಬಿ. ಪಾಟೀಲ್‌ ಸಚಿವರಾಗಿದ್ದಾಗ ಯೋಜನೆ ಆರಂಭ ಆಗಿತ್ತು. ಮೇಕೆದಾಟು ಯೋಜನೆ ಜಾರಿಗೆ ಬಿಜೆಪಿ ಕೊಡುಗೆ ಏನು? ಡಿಕೆಶಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಡಿಪಿಆರ್‌ ಆಗಿತ್ತು. ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ಸಹ ಒಪ್ಪಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕನಕಪುರದ ನಿವಾಸದಲ್ಲಿ ಸಭೆ ಬಳಿಕ ಹೇಳಿಕೆ ನೀಡಿದ್ದಾರೆ.

2018ರಲ್ಲೇ ಸುಪ್ರೀಂಕೋರ್ಟ್‌ನಲ್ಲಿ ವಿವಾದ ಇತ್ಯರ್ಥವಾಗಿದೆ. 66 ಟಿಎಂಸಿ ಮಾತ್ರ ಕುಡಿಯುವ ನೀರಿಗಾಗಿ ಸಂಗ್ರಹ ಮಾಡಿದರೆ ಯಾವುದೇ ವಿವಾದ ಆಗಲ್ಲ. ಬೆಂಗಳೂರಿನ ಜನರಿಗಾಗಿ ನೀರು ಸಂಗ್ರಹ ಆಗಬೇಕಿದೆ. ಪಾದಯಾತ್ರೆ ಬಗ್ಗೆ ಬಿಜೆಪಿಯವರು ಶುದ್ಧ ಸುಳ್ಳು ಹೇಳ್ತಿದ್ದಾರೆ. ಕೊವಿಡ್ ನೆಪ ಹೇಳಿ ಪಾದಯಾತ್ರೆ ತಡೆಯಲು ಹುನ್ನಾರ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಮಾತ್ರ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ 144 ಸೆಕ್ಷನ್‌ ಜಾರಿ ಮಾಡಿಲ್ಲ ಏಕೆ? ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿದ್ರೆ ತಪ್ಪೇನು? ಯೋಜನೆ ವಿಚಾರದಲ್ಲಿ ಬಿಜೆಪಿ ಬಣ್ಣ ಬಯಲಾಗುತ್ತೆಂದು ಭಯ ಇದೆ. ಷಡ್ಯಂತ್ರ ಮಾಡಿದ್ರೆ ತಕ್ಕ ಉತ್ತರ ಕೊಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡದಿರಲು ಸರ್ಕಾರ ನಿರ್ಧಾರ
ಮೇಕೆದಾಟು ಯೋಜನೆಗಾಗಿ ನಾಳೆ ಕಾಂಗ್ರೆಸ್‌ನಿಂದ ಪಾದಯಾತ್ರೆ ಹಿನ್ನೆಲೆ ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡದಿರಲು ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡದಂತೆ ಸಿಎಂಗೆ ಸಲಹೆ ನೀಡಲಾಗಿದೆ. ಸಿಎಂ ಬೊಮ್ಮಾಯಿಗೆ ಹಿರಿಯ ಸಚಿವರು ಸಲಹೆ ನೀಡಿರುವ ವಿಚಾರ ತಿಳಿದುಬಂದಿದೆ.

ಬಂಧನಕ್ಕೆ ಒಳಪಡಿಸಬೇಡಿ, ಅವರನ್ನು ಜನರ ಮುಂದೆ ತೋರಿಸಿ. ನಿಯಮ ಉಲ್ಲಂಘಿಸಿದರು ಅಂತಾ ಜನರಿಗೆ ತೋರಿಸಿ. ಕೊರೊನಾ ಸಮಸ್ಯೆ ಆದರೆ ಅವರೇ ಜವಾಬ್ದಾರಿಯಾಗುತ್ತಾರೆ. ಸರ್ಕಾರದಷ್ಟೇ ಅವರಿಗೂ ಜವಾಬ್ದಾರಿ‌ ಇದೆ, ಪಾದಯಾತ್ರೆ ಮಾಡಲಿ ಎಂದು ಹಿರಿಯ ಸಚಿವರು ಸಿಎಂ ಬೊಮ್ಮಾಯಿಗೆ ಸಲಹೆಯನ್ನ ನೀಡಿರುವ ಬಗ್ಗೆ ತಿಳಿದುಬಂದಿದೆ. ಸಚಿವರ ಮಾತಿಗೆ ಸಿಎಂ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 500 ಜನರು ಸೇರಿದರೂ ಅರೆಸ್ಟ್ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಅರೆಸ್ಟ್​ ಮಾಡದಿರಲು‌‌ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿ; ಸಂಗಮದಲ್ಲಿ ಕಾಲ್ನಡಿಗೆಗೆ ಶಿವಣ್ಣನಿಂದ ಚಾಲನೆ

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆಗೆ ವಿರೋಧವೇಕೆ?; ಕಾವೇರಿ ಜಲ ವಿವಾದದ ಪೂರ್ತಿ ಮಾಹಿತಿ ಇಲ್ಲಿದೆ