ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ; ಕಾಂಗ್ರೆಸ್ ನಾಯಕರಿಗೆ ರಾಮನಗರ ಎಸ್‌ಪಿ ಎಚ್ಚರಿಕೆ
ನಾವು ಪಾದಯಾತ್ರೆ ಮಾಡಲು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾಳೆಯಿಂದ (ಜ. 9) ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿರುವುದರಿಂದ ಈಗಾಗಲೇ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ನೀಡಲು ಆಗುವುದಿಲ್ಲ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡುವಂತಿಲ್ಲ ಎಂದು ಮರಳೆ ಗ್ರಾಮದಲ್ಲಿ ರಾಮನಗರ ಎಸ್‌ಪಿ ಗಿರೀಶ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆ ಗ್ರಾಮದಲ್ಲಿ ಹೇಳಿಕೆ ನೀಡಿರುವ ಎಸ್‌ಪಿ ಗಿರೀಶ್, ಈಗಾಗಲೇ ಪಾದಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ನಡುವೆ ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಬರುವುದಿಲ್ಲ. ಪಾದಯಾತ್ರೆ ಮಾಡುವುದು ತಪ್ಪು ಎಂದು ಕೇಳಿಕೊಳ್ಳುತ್ತೇನೆ. ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಯಾರನ್ನೂ ವಶಕ್ಕೆ ಪಡೆಯುವುದಿಲ್ಲ. ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪಾದಯಾತ್ರೆಗಾಗಿ ನಾವು ಬಂದೋಬಸ್ತ್ ಕೊಡುತ್ತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಭದ್ರತೆಗಾಗಿ 1,200 ಪೊಲೀಸರನ್ನು ನಿಯೋಜಿಸಿದ್ದೇವೆ ಎಂದು ಮರಳೆ ಗ್ರಾಮದಲ್ಲಿ ಟಿವಿ9ಗೆ ರಾಮನಗರ SP ಗಿರೀಶ್ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ನಾಳೆಯಿಂದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ದೇಗುಲ, ಮಸೀದಿ, ಚರ್ಚ್‌ಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ಕುಪ್ಪೆದೊಡ್ಡಿಯಲ್ಲಿರುವ ಥೆರೆಸಾಪುರ ಚರ್ಚ್‌ಗೆ ಡಿಕೆಶಿ ಇಂದು ಭೇಟಿ ನೀಡಿದ್ದಾರೆ.
ನಾಳೆ ನಡೆಯುವ ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ವಹಿಸಿಯೇ ಮೇಕೆದಾಟು ಹೋರಾಟ ಮಾಡುತ್ತೇವೆ. 144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ. ನಾವು ಪಾದಯಾತ್ರೆ ಮಾಡಲು ಮೊದಲೇ ನಿರ್ಧರಿಸಿದ್ದೆವು. ನಾವು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರ ಹಿಂದಿನ ಉದ್ದೇಶವೇನೆಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಹಾಗೇ, ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ? ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಮೇಕೆದಾಟು ಪಾದಯಾತ್ರೆ; ಕನಕಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
Mekedatu Ground Report : ಮೇಕೆದಾಟು ಎಲ್ಲಿದೆ, ಹೇಗಿದೆ ಅನ್ನೋ ಗ್ರೌಂಡ್ ರಿಪೋರ್ಟ್ ಇಲ್ಲಿದೆ
Published On - 3:18 pm, Sat, 8 January 22