ರಾಮನಗರ: ಬಿಜೆಪಿ ಮತ್ತು ಜೆಡಿಎಸ್ ವಿರುದ್ಧದ ಟೀಕಾಪ್ರಹಾರವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಪಕ್ಷಗಳಿಗೆ ಯಾವುದೇ ಸಿದ್ಧಾಂತ, ಅರ್ಹತೆ ಇಲ್ಲ. ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡ್ತೀವಿ ಎಂದರೂ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ (BJP of RSS) ಸೇರುವುದಿಲ್ಲ. ನನ್ನ ಹೆಣವೂ ಅವರೊಂದಿಗೆ ಹೋಗುವುದಿಲ್ಲ ಎಂದು ಅವರು ಹೇಳಿದರು. ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸುತ್ತವೆ. ಜೆಡಿಎಸ್‌ಗೆ ಯಾವುದೇ ಸಿದ್ಧಾಂತ ಅಥವಾ ಅರ್ಹತೆ ಇಲ್ಲ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಅವರು ಕೈಜೋಡಿಸುತ್ತಾರೆ ಎಂದು ತಿಳಿಸಿದರು.
‘ನನ್ನನ್ನು ಬಿಜೆಪಿ ಹಿಂದೂ ವಿರೋಧಿ ಎಂದು ಹೇಳುತ್ತಿದೆ. ಸಿ.ಟಿ.ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಎನ್ನುತ್ತಿದ್ದಾರೆ. ಆದರೆ ಗಾಂಧೀಜಿ ನಿಜವಾದ ಹಿಂದುವಾಗಿದ್ದರು. ಅಂಥ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುವವರನ್ನು ಹಿಂದೂಗಳು ಎನ್ನಲು ಆದೀತೆ’ ಎಂದು ಪ್ರಶ್ನಿಸಿದರು. ‘ಇವರಿಗೆ ಗೌರವವಿದೆಯೇ? ಇಂಥವರೊಂದಿಗೆ ಕೈಜೋಡಿಸಿದವರಿಗೆ ಘನತೆ ಇರಲು ಸಾಧ್ಯವೇ’ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ಕೋಲಾರ ರೌಂಡ್ಸ್: ಕುರುಬ ಸಮುದಾಯದ ವೋಟ್ ಕ್ರೋಢೀಕರಣ
ತಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಕುರಿತು ಪ್ರಸ್ತಾಪಿಸಿದ ಅವರು, ‘ಎಲ್ಲರಿಗೂ ಆಹಾರ ಭದ್ರತೆ ನೀಡಿದೆ. ಬಿಜೆಪಿಗೆ ಈ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನು ಅನ್ನಭಾಗ್ಯ ಯೋಜನೆ ಜಾರಿಮಾಡಿದೆ. ಬಸವಜಯಂತಿಯಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಆಹಾರ ಭದ್ರತೆ ಯೋಜನೆಗೆ ಸಹಿ ಹಾಕಿದೆ. ರೈತರು ಮತ್ತು ಪಶುಪಾಲಕರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಮೊದಲು ತಿಂಗಳಿಗೆ 7 ಕೆಜಿ ಅಕ್ಕಿ ಸಿಗುತ್ತಿತ್ತು. ಆದರೆ ಈಗ ಬಿಜೆಪಿ ಇದನ್ನು 5 ಕೆಜಿಗೆ ಇಳಿಸಿದೆ. ಮುಂದೆ ನಾವು ಅಧಿಕಾರಕ್ಕೆ ಬಂದಾಗ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂಪಾಯಿ ವೇತನ ಕೊಡುತ್ತೇವೆ ಎಂದು ಘೋಷಿಸಿದರು.
‘ಇವೆಲ್ಲವೂ ನಮ್ಮ ಸ್ವಂತ ಹಣವಲ್ಲ. ಜನರ ತೆರಿಗೆ ಹಣವನ್ನು ಸರಿಯಾದ ಕ್ರಮದಲ್ಲಿ ಬಳಸಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದಾಗ ಒಂದು ಲೀಟರ್ ಹಾಲಿಗೆ ಕೊಡುತ್ತಿರುವ ಸಹಾಯಧನವನ್ನು 5ರಿಂದ 6ಕ್ಕೆ ಹೆಚ್ಚಿಸುತ್ತೇವೆ’ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:05 am, Tue, 31 January 23