ರಾಮನಗರ, ಜುಲೈ 26: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಆಗಸ್ಟ್ 1 ರಿಂದ ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್, ಕೃಷಿ ವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ನಿಷೇಧ ಹೇರಿದೆ. ಹಾಗೂ ಈ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ಸಂಬಂಧ ಫೀಲ್ಡ್‌ಗೆ ಇಳಿದಿರುವ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್(Alok Kumar) ಅವರು ಎರಡನೇ ಬಾರಿ ಭೇಟಿ ನೀಡಿ ನೂತನ ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳು, ಆಟೋ, ಟ್ರಾಕ್ಟರ್‌ಗಳು, ಮೋಟಾರ್ ರಹಿತ ವಾಹನಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು, ಕ್ವಾಡ್ರಿ ಸೈಕಲ್‌ಗಳ ಸಂಚಾರವನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿಷೇಧಿಸಲಾಗಿದೆ. ಇವುಗಳು ನಿಧಾನವಾಗಿ ಚಲಿಸುವ ವಾಹನಗಳು. ಎಕ್ಸ್‌ಪ್ರೆಸ್‌ವೇ ವೇಗವಾಗಿ ಚಲಿಸುವ ವಾಹನಗಳಿಗೆ ಮಾಡಲಾಗಿದೆ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ನಿಧಾನಗತಿಯ ವಾಹನಗಳಿಗೆ ಪರ್ಯಾಯ ಮಾರ್ಗಗಳು ಮತ್ತು ಪ್ರತ್ಯೇಕ ರಸ್ತೆಗಳು ಲಭ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ನೂತನ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದ ಹಿನ್ನೆಲೆ ಅವಘಡ ತಡೆಯಲು ಫೀಲ್ಡ್‌ಗೆ ಇಳಿದ ಎಡಿಜಿಪಿ ಅಲೋಕ್ ಕುಮಾರ್ ಮಂಗಳವಾರ (ಜು.25) 2ನೇ ಬಾರಿಗೆ ಹೆದ್ದಾರಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅತಿ ವೇಗದ ಚಾಲನೆಯನ್ನು ನಿಭಾಯಿಸಲು, ಪೊಲೀಸ್ ಇಲಾಖೆಯು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಶೀಘ್ರದಲ್ಲೇ ಮೈಸೂರಿನಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಪ್ರಯೋಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಸಂಚಾರ ಅಪಾಯಗಳು! ಮೃತ್ಯುಕೂಪವಾಗುತ್ತಿದೆ ಬೆಂಗಳೂರು-ಮೈಸೂರು ನೂತನ ಹೆದ್ದಾರಿ
ಇನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಸುರಕ್ಷತೆ ಸಂಬಂಧಿತ ಪರಿಶೀಲನೆ ನಡೆಸಿದೆ. ಅತಿ ವೇಗ ಸಂಚಾರವನ್ನು ಪತ್ತೆ ಹಚ್ಚಲು ಪ್ರಾಯೋಗಿಕ ಆಧಾರದ ಮೇಲೆ AI ಆಧಾರಿತ ಕ್ಯಾಮರಾಗಳನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಮೈಸೂರು ನಗರದಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಪರಿಚಯಿಸಲಾಗುವುದು, ಈ ನಿಟ್ಟಿನಲ್ಲಿ ನಾಗರಿಕರ ಯಾವುದೇ ಸಲಹೆ ಸ್ವಾಗತಾರ್ಹ ಎಂದು ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Inspected the progress of road safety related work on Bengaluru- Mysore Expressway
AI based cameras deployed on trial basis to capture over speeding
Introducing Intelligent Traffic Management System in Mysore City soon,any suggestion from citizens is welcome in this regard
— alok kumar (@alokkumar6994) July 25, 2023
ಇತ್ತೀಚಿನ ದಿನಗಳಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಹಲವು ವಾಹನಗಳು ರಾಂಗ್ ರೂಟ್‌ನಲ್ಲಿ ಸಂಚರಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಇತರ ಪ್ರಯಾಣಿಕರಿಗೆ ಅಪಾಯ ತಂದೊಡ್ಡುತ್ತಿವೆ. ಹೆದ್ದಾರಿಯಲ್ಲಿ ಯಾರಾದರೂ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಲೈಸೆನ್ಸ್ ರದ್ದುಪಡಿಸುವುದಾಗಿ ಎಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ