ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ನಿನ್ನೆ ತಡರಾತ್ರಿ ಬೆಂಗಳೂರು ತಲುಪಿದ್ದಾರೆ. ಇಂದು ಮತ್ತು ನಾಳೆ ಬೆಂಗಳೂರಿನಲ್ಲೇ ರಮೇಶ್ ಜಾರಕಿಹೊಳಿ ವಾಸ್ತವ್ಯ ಹೂಡಲಿದ್ದಾರೆ… ಆ ವೇಳೆ ಬದಲಾದ ರಾಜಕೀಯ ಬಾಣ ಹೂಡಲಿದ್ದಾರೆ ಎಂದು ಅರ್ಥೈಸಲಾಗಿದೆ. ಏಕೆಂದರೆ ಅವರು ದಿಢೀರನೆ ಬೆಂಗಳೂರಿಗೆ ಬಂದಿದ್ದಾರೆ. ಪೂರ್ವ ನಿಗದಿಯಂತೆ ಅವರು ಮುಂಬೈಗೆ ತೆರಳಬೇಕಿತ್ತು.
ತಾಜಾ ವರದಿಗಳ ಪ್ರಕಾರ ಗೌಪ್ಯ ಸ್ಥಳಕ್ಕೆ ತೆರಳಿರುವ ರಮೇಶ್ ಜಾರಕಿಹೊಳಿ ಒಂದು ಗಂಟೆಯಿಂದ ಗೌಪ್ಯ ಸ್ಥಳದಲ್ಲಿ ಆಪ್ತರ ಜೊತೆ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಅವರ ನಡೆ ಇನ್ನೂ ನಿಗೂಢ ಆಗುತ್ತಾ ಸಾಗಿದೆ. ಸದಾಶಿವನಗರದಲ್ಲಿರುವ ಮನೆಯಿಂದ ಒಂದು ಗಂಟೆ ಹಿಂದೆ ತೆರಳಿರುವ ರಮೇಶ್ ಜಾರಕಿಹೊಳಿ, ಮಂತ್ರಿ ಸ್ಥಾನಕ್ಕಾಗಿ ತೆರೆಮರೆಯ ಕಸರತ್ತು ಜಾರಿಯಲ್ಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ರಮೇಶ್ ಜಾರಕಿಹೊಳಿ ಅವರನ್ನು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭೇಟಿಗೂ ರಮೇಶ್ ನಿರ್ಧರಿಸಿದ್ದರಾದರೂ ನಳಿನ್‌ಕುಮಾರ್ ಕಟೀಲ್ ಅವರ ಸಹೋದರ ಮೃತಪಟ್ಟ ಹಿನ್ನೆಲೆ ಕೊನೆ ಕ್ಷಣದಲ್ಲಿ ನಳಿನ್‌ಕುಮಾರ್ ಕಟೀಲ್ ಭೇಟಿ ರದ್ದು ಮಾಡಲಾಗಿದೆ.
ಜುಲೈ ಒಂದರ ಬಳಿಕ ಜಾರಕಿಹೊಳಿ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ?:
ಈ ಮಧ್ಯೆ, ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಅವರುಗಳು ರಮೇಶ್ ಜಾರಕಿಹೊಳಿ ಜೊತೆಯೇ ಇದ್ದು, ಅವರ ಮನವೊಲಿಕೆ ಕಾರ್ಯ ನಿರಂತರ ಜಾರಿಯಲ್ಲಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಇಂದು ಕೆಲ ಆಪ್ತರು, ಸ್ನೇಹಿತರ ಜೊತೆ ರಮೇಶ್ ಜಾರಕಿಹೊಳಿ ಸಮಾಲೋಚನೆ ನಡೆಸಲಿದ್ದಾರೆ. ಅದಾದ ಮೇಲೆ ನಾಳೆ ರಾತ್ರಿ ಗೋಕಾಕ್‌ಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ 1ರಂದು ಗೋಕಾಕ್‌ನಲ್ಲಿ ಕೊವಿಡ್ ವಿರುದ್ಧ ಹೋರಾಡಿದ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಅದರಲ್ಲಿ ರಮೇಶ್ ಪಾಲ್ಗೊಳ್ಳಲಿದ್ದಾರೆ. ಗೋಕಾಕ್ ಮತ್ತು ಮೂಡಲಗಿ ಕ್ಷೇತ್ರದ ವೈದ್ಯರಿಗೆ ಸನ್ಮಾನ ನಡೆಯಲಿದೆ. ಸಮಾರಂಭದಲ್ಲಿ ಭಾಗಿಯಾಗಲಿರುವ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಜುಲೈ ಒಂದರ ಬಳಿಕ ಜಾರಕಿಹೊಳಿ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಒಳ್ಳೆಯದೋ, ಕೆಟ್ಟದ್ದೋ ದೇವರು ತೀರ್ಮಾನ ಮಾಡ್ತಾರೆ ಎಂದ ರೇವಣ್ಣ
(ramesh jarkiholi brothers return to bangalore july first week they may conduct press meet)