ಹಾವೇರಿ ಜಿಲ್ಲೆಯ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಅಲ್ಲಿ ಆಪರೇಶನ್, ಇಲ್ಲಿ ಆರೈಕೆ ಎಂಬ ಸ್ಥಿತಿ ನಿರ್ಮಾಣ; ಸೂಕ್ತ ಚಿಕಿತ್ಸೆಗಾಗಿ ಜನರ ಪರದಾಟ
ಜಿಲ್ಲಾಸ್ಪತ್ರೆಯಲ್ಲಿನ ಇಎನ್ಟಿ ಸರ್ಜನ್ ರನ್ನು ಜುಲೈ 1ರಿಂದ ಹುಬ್ಬಳ್ಳಿಯ ಕಿಮ್ಸ್ಗೆ ಬ್ಲ್ಯಾಕ್ ಫಂಗಸ್ ಸರ್ಜರಿಗೆ ಸಂಬಂಧಿಸಿದ ತರಬೇತಿಗೆ ಕಳಿಸಲಾಗಿದೆ. 15 ದಿನಗಳ ತರಬೇತಿ ಪಡೆದುಕೊಂಡು ಅವರು ವಾಪಸ್ ಬಂದ ಮೇಲೆ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಜರಿ ಮಾಡಲಾಗುತ್ತದೆ. ಆ ವೇಳೆಗೆ ಜಿಲ್ಲಾಸ್ಪತ್ರೆಗೆ ಎಂಡೋಸ್ಕೋಪಿ ಬರುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ.
ಹಾವೇರಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುವ ವ್ಯವಸ್ಥೆ ಮಾಡಿಕೊಳ್ಳುವಂತೆ ಸರಕಾರ ಜಿಲ್ಲಾಡಳಿತಗಳಿಗೆ ಸೂಚಿಸಿತ್ತು. ಅದರಂತೆ ಬಹುತೇಕ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗಾಗಿಯೇ ಪ್ರತ್ಯೇಕ ಬೆಡ್ಗಳು ಮತ್ತು ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಅಲ್ಲಿನ ಸೋಂಕಿತರಿಗೆ ಅಲ್ಲಿಯ ಜಿಲ್ಲಾಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿನ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಮಾತ್ರ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ ಕೊರೊನಾ ಎರಡನೆ ಅಲೆ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಅದರ ಜತೆ ಜತೆಗೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಟ ಕೂಡ ಬೆಂಬಿಡದೆ ಕಾಡುತ್ತಿದೆ. ಈವರೆಗೆ 53 ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ಕೂಡ ಸಿಗುತ್ತಿಲ್ಲ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಅಲ್ಲಿ ಆಪರೇಶನ್, ಇಲ್ಲಿ ಆರೈಕೆ ಎನ್ನುವಂತಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಿಂದ ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ವೈದ್ಯರು ಸೂಚಿಸುತ್ತಿದ್ದಾರೆ.
ಇನ್ನೊಂದು ಕಡೆ ಹೀಗೆ ಹಾವೇರಿಯಿಂದ ಹೋದ ಜನರಿಗೆ ಜಿಲ್ಲೆಯ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಆಯಾ ಜಿಲ್ಲೆಯಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ವಾಪಸ್ ಕಳಿಸಿದ ಘಟನೆಗಳೂ ನಡೆದಿವೆ. ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದ ಕಾರಣಕ್ಕೆ ಬ್ಲ್ಯಾಕ್ ಫಂಗಸ್ ಸೋಂಕಿತರನ್ನು ಹುಬ್ಬಳ್ಳಿಯ ಕಿಮ್ಸ್ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಣಿಸಿಕೊಂಡ53 ಪ್ರಕರಣಗಳ ಪೈಕಿ ಸರ್ಜರಿ ಅಗತ್ಯವಿದ್ದ 21 ಪ್ರಕರಣಗಳು ಹುಬ್ಬಳ್ಳಿ ಮತ್ತು ದಾವಣಗೆರೆಗೆ ರೆಫರ್ ಆಗಿವೆ. ಶಸ್ತ್ರಚಿಕಿತ್ಸೆಗೆ ರೆಫರ್ ಆಗಿದ್ದ ಇಬ್ಬರು ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಳಿದಂತೆ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ 21 ಜನ ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗಲೂ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ, ಆಪರೇಶನ್ ಮಾಡುವುದಕ್ಕೆ ತಜ್ಞ ವೈದ್ಯರಿಲ್ಲ. ಜಿಲ್ಲಾಸ್ಪತ್ರೆಯಲ್ಲಿನ ಇಎನ್ಟಿ ಸರ್ಜನ್ ರನ್ನು ಜುಲೈ 1ರಿಂದ ಹುಬ್ಬಳ್ಳಿಯ ಕಿಮ್ಸ್ಗೆ ಬ್ಲ್ಯಾಕ್ ಫಂಗಸ್ ಸರ್ಜರಿಗೆ ಸಂಬಂಧಿಸಿದ ತರಬೇತಿಗೆ ಕಳಿಸಲಾಗಿದೆ. 15 ದಿನಗಳ ತರಬೇತಿ ಪಡೆದುಕೊಂಡು ಅವರು ವಾಪಸ್ ಬಂದ ಮೇಲೆ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಜರಿ ಮಾಡಲಾಗುತ್ತದೆ. ಆ ವೇಳೆಗೆ ಜಿಲ್ಲಾಸ್ಪತ್ರೆಗೆ ಎಂಡೋಸ್ಕೋಪಿ ಬರುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಆರ್ಭಟದ ಕೊನೆಯ ದಿನಗಳಲ್ಲಿ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಶುರುವಾಗಿದೆ. ಬ್ಲ್ಯಾಕ್ ಫಂಗಸ್ಗೆ ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಬಲಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೇ ಎಲ್ಲ ರೀತಿಯ ಚಿಕಿತ್ಸೆ, ಆರೈಕೆ, ಸರ್ಜರಿ ಸಿಗುವಂತೆ ಮಾಡುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಲೆ ಬಂದಿತ್ತು. ಆದರೆ ಈವರೆಗೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಈ ಪರಿಸ್ಥಿತಿ ಸುಧಾರಿಸಬೇಕಿದೆ.
ಇದನ್ನೂ ಓದಿ:
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ನಿಗಡಿಪಡಿಸಿದ ಸರ್ಕಾರ; ಎಷ್ಟು ದರ ಎಂಬ ಮಾಹಿತಿ ಇಲ್ಲಿದೆ