ರಸ್ತೆ ಬದಿ ನಿಲ್ಲಿಸಿದ್ದ ಕಂಟೇನರ್‌ನಲ್ಲಿದ್ದ ಫ್ಲಿಪ್ ಕಾರ್ಟ್‌ನ ಲಕ್ಷಾಂತರ ಮೌಲ್ಯದ ವಸ್ತುಗಳ ಕದ್ದ ಖದೀಮರು.. ಚಾಲಕನ ಮೇಲೆಯೇ ಅನುಮಾನ
ಕಂಟೇನರ್‌ನಲ್ಲಿ ಸುಮಾರು 1 ಕೋಟಿ 60 ಲಕ್ಷ ಮೌಲ್ಯದ ಸಾಮಾಗ್ರಿಗಳು ಇದ್ದವು. ಈ ಪೈಕಿ ಖದೀಮರು ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ನೆಲಮಂಗಲ: ರಸ್ತೆ ಬದಿ ನಿಲ್ಲಿಸಿದ್ದ ಕಂಟೇನರ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಬಂದಿದ್ದ ಫ್ಲಿಪ್ ಕಾರ್ಟ್‌ಗೆ ಸೇರಿದ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ.
ಕಂಟೇನರ್‌ನಲ್ಲಿ ಸುಮಾರು 1 ಕೋಟಿ 60 ಲಕ್ಷ ಮೌಲ್ಯದ ಸಾಮಾಗ್ರಿಗಳು ಇದ್ದವು. ಈ ಪೈಕಿ ಖದೀಮರು ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಕೆಂಗಲ್ ಕೆಂಪೋಹಳ್ಳಿ ಗ್ರಾಮದ ರಸ್ತೆ ಬದಿ ಕಂಟೇನರ್ ನಿಲ್ಲಿಸಿ ಲಾರಿ ಚಾಲಕ ರಂಗಸ್ವಾಮಿ ವಿಶ್ರಾಂತಿ ಪಡೆಯಲು ಮಲಗಿದ್ದಾನೆ. ಈ ವೇಳೆ ಖತರ್ನಾಕ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬಳಿಕ ಅನ್‌ಲೋಡ್ ಮಾಡುವ ವೇಳೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಲಾರಿ ಮಾಲೀಕ ಕಂಟೇನರ್ ಚಾಲಕ ರಂಗಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದರ್ ಬಾಹರ್ ಜೂಜಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಐನಳ್ಳಿ ಬಳಿ ನೀಲಗಿರಿ ತೋಪಿನಲ್ಲಿ ಜೂಜಾಟವಾಡುತ್ತಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಬೆಳವಂಗಲ ಪಿಎಸ್ಐ ಗಜೇಂದ್ರ ನೇತೃತ್ವದಲ್ಲಿ ದಾಳಿ ನಡೆದಿದ್ದು ಅಂದರ್ ಬಾಹರ್ನಲ್ಲಿ ತೊಡಗಿದ್ದ 8 ಜನರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರ ಬಳಿಯಿಂದ 95,500 ನಗದು, 1 ಕಾರು, 4 ಬೈಕ್, 8 ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ
Published On - 9:45 am, Tue, 29 June 21