ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಇದುವರೆಗೂ ಸಿಡಿಯಲ್ಲಿ ಇರುವುದು ತಾನಲ್ಲ ಎಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ಉಲ್ಟಾ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಿಡಿಯಲ್ಲಿರೋದು ನಾನೇ ಎಂದು ಅಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗೆಂದು ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತನಿಖೆ ವೇಳೆ, ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸಹಮತದಿಂದ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಹೇಳಿದ್ದಾರೆ. ಪ್ರಾಜೆಕ್ಟ್ ವಿಚಾರವಾಗಿ ಯುವತಿ ತಮ್ಮನ್ನು ಭೇಟಿಯಾಗಿದ್ದರು ಎಂದು ತಿಳಿಸಿರುವ ಬಗ್ಗೆ ಮಾಹಿತಿ ದೊರಕಿದೆ.
ರಮೇಶ್ ಜಾರಕಿಹೊಳಿ, ಇಲ್ಲಿಯವರೆಗೂ ವಿಡಿಯೋದಲ್ಲಿರುವುದು ನಾನಲ್ಲ ಎಂದಿದ್ದರು. ಗೊತ್ತಿಲ್ಲದೇ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದ್ದರು. ವಿಡಿಯೋ ಎಡಿಟ್ ಮಾಡಲಾಗಿದೆ ಎಂಬ ಇತ್ಯಾದಿ ವಿಚಾರಗಳನ್ನು ತಿಳಿಸಿದ್ದರು. ಅವರ ಸಹೋದರರು ಕೂಡ ಇದೇ ರೀತಿ ಹೇಳುತ್ತಾ ಬಂದಿದ್ದರು. ಆದರೆ ಈಗ, ಶಾಸಕರು ಉಲ್ಟಾ ಹೊಡೆದಂತಿದೆ. ಇದರಿಂದ, ಸಿಡಿ ಬಹಿರಂಗ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.
ನ್ಯಾಯಲಯಕ್ಕೂ ತನಿಖಾ ಪ್ರಗತಿ ವರದಿ ಸಲ್ಲಿಸಬೇಕಿತ್ತು. ಪೊಲೀಸರಿಗೂ ರಮೇಶ್ ಹೇಳಿಕೆ ಪಡೆಯಲೇಬೇಕಿತ್ತು. ಸಮರ್ಪಕ ತನಿಖೆ ದೃಷ್ಟಿಯಿಂದ ಹೇಳಿಕೆ ಪಡೆಯಬೇಕಿತ್ತು. ರಮೇಶ್ ಹೇಳಿಕೆಗೂ, ಸಾಕ್ಷ್ಯಕ್ಕೂ ಪೂರಕ ಸಂಬಂಧವಿರಬೇಕು. ಇಲ್ಲವಾದಲ್ಲಿ ರಮೇಶ್ ಜಾರಕಿಹೊಳಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಈ ದೃಷ್ಟಿಯಿಂದ ಜಾರಕಿಹೊಳಿ ಇಂದು ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಸಂತ್ರಸ್ತೆ ಪರ ವಕೀಲ ಜಗದೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಟಿವಿ9ಗೆ ಸಂತ್ರಸ್ತೆ ಪರ ವಕೀಲ ಜಗದೀಶ್ ಕುಮಾರ್ ಪ್ರತಿಕ್ರಿಯೆ ನೀಡಿ, ಸಿಡಿ ಪ್ರಕರಣ ಮುಚ್ಚಿಹಾಕಲು ಎಸ್ಐಟಿ ಮೇಲೆ ಒತ್ತಡವಿದೆ. ಸರ್ಕಾರ ಹೇಳಿದಂತೆ ಎಸ್ಐಟಿ ಅಧಿಕಾರಿಗಳು ಕೇಳುತ್ತಿದ್ದಾರೆ. ಒತ್ತಡವಿರುವುದರಿಂದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಾಪಸ್ ಪಡೆಯುವಂತೆ ಒತ್ತಡ: ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆಯಿಂದ ಪತ್ರ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತನಿಖೆ ಮುಂದುವರಿಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
Published On - 7:10 pm, Mon, 24 May 21