ಕರ್ನಾಟಕದಲ್ಲಿ ಆಮ್ಲಜನಕ ಬಿಕ್ಕಟ್ಟು; ಬಳ್ಳಾರಿಯಲ್ಲಿ ಎರಡು ಘಟಕ ಸ್ಥಗಿತ, ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ
ಎರಡು ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ರಾಜ್ಯದ ಆಮ್ಲಜನಕ ಸರಬರಾಜು 220 ಮೆಟ್ರಿಕ್ಟನ್ಗೆ ಸೀಮಿತಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ರಾಜ್ಯಕ್ಕೆ ಪ್ರತಿದಿನದ ಆಮ್ಲಜನಕ ಸರಬರಾಜು ಮಿತಿ 850 ಮೆಟ್ರಿಕ್ ಟನ್ ಇತ್ತು.
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಏರ್ ವಾಟರ್ ಮತ್ತು ಪ್ರಾಕ್ಸೈರ್ ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಕಾರಣ ಕರ್ನಾಟಕದಲ್ಲಿ ಶೇ 20ರಷ್ಟು ಆಮ್ಲಜನಕ ಸರಬರಾಜು ವ್ಯತ್ಯಯವಾಗುವ ಅಪಾಯ ಎದುರಾಗಿದೆ. ಈ ಸಂಬಂಧ ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೆ ಸರ್ಕಾರ ತುರ್ತು ನೊಟೀಸ್ ನೀಡಿದೆ. ಎರಡು ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ರಾಜ್ಯದ ಆಮ್ಲಜನಕ ಸರಬರಾಜು 220 ಮೆಟ್ರಿಕ್ಟನ್ಗೆ ಸೀಮಿತಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ರಾಜ್ಯಕ್ಕೆ ಪ್ರತಿದಿನದ ಆಮ್ಲಜನಕ ಸರಬರಾಜು ಮಿತಿ 850 ಮೆಟ್ರಿಕ್ ಟನ್ ಇತ್ತು. ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಮೇ 21ರಂದು ರಾಜ್ಯದ ಆಮ್ಲಜನಕ ಬೇಡಿಕೆ ಪ್ರಮಾಣ 822 ಮೆಟ್ರಿಕ್ ಟನ್ ಮತ್ತು ಮೇ 22ಕ್ಕೆ 885 ಮೆಟ್ರಿಕ್ ಟನ್ ಇತ್ತು. ಬೆಂಗಳೂರು ನಗರದಲ್ಲಿ ಕ್ರಮವಾಗಿ 308 ಮೆಟ್ರಿಕ್ ಟನ್ ಮತ್ತು 340 ಮೆಟ್ರಿಕ್ ಟನ್ ಬೇಡಿಕೆಯಿತ್ತು. ಮೇ 21, 22ರಂದು ಮೈಸೂರು ಜಿಲ್ಲೆಯಲ್ಲಿ 54.8 ಮೆಟ್ರಿಕ್ ಟನ್ ಮತ್ತು 55.9 ಮೆಟ್ರಿಕ್ ಟನ್, ಬಳ್ಳಾರಿ ಜಿಲ್ಲೆಯಲ್ಲಿ 40.15 ಮತ್ತು 41.26, ಧಾರವಾಡ ಜಿಲ್ಲೆಯಲ್ಲಿ 31.96 ಮತ್ತು 57.08 ಮೆಟ್ರಿಕ್ ಟನ್ ಆಮ್ಲಜನಕದ ಬೇಡಿಕೆಯಿತ್ತು.
ಇದೀಗ ಆಮ್ಲಜನಕ ಉತ್ಪಾದನೆಯಲ್ಲಿ ತೊಂದರೆ ಎದುರಾಗಿರುವುದರಿಂದ ಜಿಲ್ಲಾಡಳಿತಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ಬೇಡಿಕೆಯ ಶೇ 20ರಷ್ಟು ಪ್ರಮಾಣ ಕಡಿಮೆಯಾಗಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ರಾಜ್ಯ ಸರ್ಕಾರವು ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡಿದೆ. ಸೋಮವಾರ ಮತ್ತು ಮಂಗಳವಾರ ಆಮ್ಲಜನಕ ಬೇಡಿಕೆಯನ್ನು ಎಚ್ಚರಿಕೆಯಿಂದ ನಿರ್ವಹಿಸಲು ಸೂಚನೆ ನೀಡಿದೆ. ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಆಮ್ಲಜನಕದ ದಾಸ್ತಾನು ಪ್ರಮಾಣವನ್ನು ಗಮನಿಸಿಕೊಳ್ಳುವಂತೆ, ಆಪತ್ಕಾಲಕ್ಕೆಂದು ಇರಿಸಿಕೊಂಡಿರುವ ದಾಸ್ತಾನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕೋವಿಡ್ ಉಸ್ತುವಾರಿ ಘಟಕದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಈವರೆಗೆ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ ಹೆಚ್ಚೂಕಡಿಮೆ ಸಮಸಮು ಎನ್ನುವಂತಿತ್ತು. ಆದರೆ ಈಗ ಆಗಿರುವ ಸಮಸ್ಯೆಯ ಪರಿಣಾಮ ಮಂಗಳವಾರ ಮತ್ತು ಬುಧವಾರ ಗೋಚರಿಸಲಿದೆ. ವಿವಿಧ ಜಿಲ್ಲೆಗಳು ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಪ್ರಮಾಣವನ್ನು ಮರುಹಂಚಿಕೆ ಮಾಡಲಾಗಿದೆ. ಬುಧವಾರ ರಾತ್ರಿಯ ಹೊತ್ತಿಗೆ ಆಮ್ಲಜನಕದ ಪೂರೈಕೆ ಸಹಜ ಸ್ಥಿತಿಗೆ ಬರಬಹುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ, ಆದರೆ ಆಮ್ಲಜನಕದ ಬೇಡಿಕೆ ಕಡಿಮೆಯಾಗಿಲ್ಲ ಕರ್ನಾಟಕದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಆಮ್ಲಜನಕದ ಬೇಡಿಕೆ ಕಡಿಮೆಯಾಗಿಲ್ಲ ಎಂದು ರಾಜ್ಯದಲ್ಲಿ ಆಮ್ಲಜನಕ ಸರಬರಾಜು ನಿರ್ವಹಣೆಯ ಉಸ್ತುವಾರಿ ಅಧಿಕಾರಿ ಮೌನೀಶ್ ಮುದ್ಗೀಲ್ ‘ಟಿವಿ-9 ಕನ್ನಡ ಡಿಜಿಟಲ್’ಗೆ ಪ್ರತಿಕ್ರಿಯಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆ 2.4 ಲಕ್ಷದಿಂದ 1.2 ಲಕ್ಷಕ್ಕೆ ಇಳಿಕೆಯಾದರೂ ಆಮ್ಲಜನಕದ ಬೇಡಿಕೆ ಪ್ರಮಾಣ ಕಡಿಮೆಯಾಗಿಲ್ಲ. ಐಸಿಯು ಮತ್ತು ವೆಂಟಿಲೇಟರ್ ಸಹಿತ ಐಸಿಯುಗಳಲ್ಲಿರುವ ರೋಗಿಗಳ ಸಂಖ್ಯೆ ಬೆಂಗಳೂರಿನಲ್ಲಿ ಇನ್ನೂ ಕಡಿಮೆಯಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಮ್ಲಜನಕದ ಬೇಡಿಕೆ ಎಂದಿನಂತೆ ಮುಂದುವರಿದಿರಲು ಇದು ಮುಖ್ಯ ಕಾರಣ ಇರಬಹುದು ಎಂದು ಅವರು ವಿಶ್ಲೇಷಿಸಿದರು.
ಬೆಂಗಳೂರು ನಗರದಲ್ಲಿ ಎಷ್ಟು ಆಮ್ಲಜನಕ ಬಳಕೆಯಾಗುತ್ತಿದೆ ಎಂಬ ಬಗ್ಗೆ ವಿಸ್ತೃತವಾದ ಮಾಹಿತಿ ಸಂಗ್ರಹ ವ್ಯವಸ್ಥೆ ರೂಪುಗೊಂಡಿಲ್ಲ. ರಾಜ್ಯಕ್ಕೆ ಹೆಚ್ಚುವರಿಯಾಗಿ ಬರುತ್ತಿರುವ ಆಮ್ಲಜನಕವನ್ನು ಬಿಬಿಎಂಪಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಬಿಬಿಎಂಪಿಯಿಂದ ನಿಖರ ಮಾಹಿತಿ ಸಂಗ್ರಹಿಸುತ್ತೇವೆ. ನಿಗದಿತ ಉತ್ಪಾದನೆ ಮತ್ತು ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿಯೂ ನಮ್ಮ ರಾಜ್ಯಕ್ಕೆ ಪ್ರತಿದಿನ ಆಮ್ಲಜನಕದ ವಿಶೇಷ ಸರಬರಾಜು ಬರುತ್ತಿದೆ. ಇದು ನಿಯಮಿತವಾಗಿ ಕೇಂದ್ರ ಸರ್ಕಾರದಿಂದ ಹಂಚಿಕೆಯಾದ ಭಾಗದಂತೆ ಬರುವ ಆಮ್ಲಜನಕ ಅಲ್ಲ ಎನ್ನುವುದನ್ನು ಗಮನಿಸಬೇಕು ಎಂದು ಅವರು ಗಮನ ಸೆಳೆದರು.
ಇವತ್ತು (ಮೇ 24) ಲಿಂಡೆ ಸಂಸ್ಥೆಯಿಂದ 150 ಮೆಟ್ರಿಕ್ ಟನ್ ಆಮ್ಲಜನಕ ಬಂದಿದೆ. ರಿಲಯನ್ಸ್ ಫೌಂಡೇಶನ್ನಿಂದ ನಿನ್ನೆ (ಮೇ 23) 109 ಮೆಟ್ರಿಕ್ ಟನ್, ಮೊನ್ನೆ (ಮೇ 22) 68.8 ಮೆಟ್ರಿಕ್ ಟನ್ ಬಂದಿತ್ತು. ನಾಳೆ (ಮೇ 26) ಕೇಂದ್ರ ಸರ್ಕಾರದಿಂದ 115 ಮೆಟ್ರಿಕ್ ಟನ್ ಬರುತ್ತಿದೆ. ಹೀಗೆ ಆಗಾಗ ವಿಶೇಷ ಸರಬರಾಜು ಬರುತ್ತಿರುವುದರಿಂದ ನಾವು ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಅವರು ವಿವರಿಸಿದರು.
ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ನಿಗದಿತ 765 ಮೆಟ್ರಿಕ್ ಟನ್ಗಿಂತಲೂ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ ಹೋಲಿಸುವುದಾದರೆ, ಖರ್ಚು ಹೆಚ್ಚು-ಆದಾಯ ಕಡಿಮೆಯಿರುವ ಕುಟುಂಬದಂತೆ ಆಗಿದೆ. 850 ಮೆಟ್ರಿಕ್ ಟನ್ ಬೇಡಿಕೆ ಈಡೇರಿಸಲು ನಾವು ವಿವಿಧೆಡೆಗಳಿಂದ ಬರುವ ನೆರವಿಗಾಗಿ ಕಾದಿರುತ್ತೇವೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಈಗ ಆಮ್ಲಜನಕದ ಮಿತಿಯನ್ನು 1200 ಮೆಟ್ರಿಕ್ಟನ್ಗೆ ಹೆಚ್ಚಿಸಿದೆ. ಇದು ಇನ್ನೊಂದೆರೆಡು ದಿನಗಳಲ್ಲಿ (ಮೇ 25ರ ನಂತರ) ಈ ನೂತನ ಮಿತಿಯು ಅನುಷ್ಠಾನಕ್ಕೆ ಬರಲಿದೆ. ನಮಗೆ ಮಹಾರಾಷ್ಟ್ರದಿಂದ ಆಮ್ಲಜನಕವನ್ನು ಹಂಚಿಕೆ ಮಾಡಲಾಗಿದೆ. ಅಲ್ಲಿಂದ ಆಮ್ಲಜನಕ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಅವರು ವಿವರಿಸಿದರು.
(Karnataka oxygen crisis two plants in Bellary breaks down government redistributes oxygen quota)
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಸಮಸ್ಯೆ, 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಎಂದು ಸಂದೇಶ ರವಾನೆ
ಇದನ್ನೂ ಓದಿ: ಮಿನಿ ಆಸ್ಪತ್ರೆ, ಆಮ್ಲಜನಕ ಸ್ಥಾವರ, ವೆಂಟಿಲೇಟರ್; ಕೊರೊನಾ ವಿರುದ್ಧದ ಹೋರಾಟಕ್ಕೆ 45 ಕೋಟಿ ರೂ. ದೇಣಿಗೆ ನೀಡಿದ ಆರ್ಸಿಬಿ