ಸುರ್ಜೇವಾಲ ವಿರುದ್ಧ ಸಚಿವರ ಅಸಮಾಧಾನ: ಸುಳ್ಳು ಹೇಳಿ ವರ್ಚಸ್ಸು ಹಾಳು ಮಾಡ್ತಿದ್ದಾರೆಂದ ಡಿಕೆ ಶಿವಕುಮಾರ್

ಕರ್ನಾಟಕ ಕಾಂಗ್ರೆಸ್‌ ಆಂತರಿಕ ಕಲಹದ ವದಂತಿಗಳ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧದ ಅಸಮಾಧಾನದ ವರದಿಗಳನ್ನು ತಳ್ಳಿಹಾಕಿದ್ದಾರೆ. ಹಿರಿಯ ನಾಯಕರ ಮನೆಗೆ ಭೇಟಿ ನೀಡಿದ್ದರ ಬಗ್ಗೆಯೂ ಸ್ಪಷ್ಟೀಕರಣ ನೀಡಿದ ಅವರು, ಮಾಧ್ಯಮಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುರ್ಜೇವಾಲ ವಿರುದ್ಧ ಸಚಿವರ ಅಸಮಾಧಾನ: ಸುಳ್ಳು ಹೇಳಿ ವರ್ಚಸ್ಸು ಹಾಳು ಮಾಡ್ತಿದ್ದಾರೆಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
Sahadev Mane
| Updated By: Ganapathi Sharma

Updated on: Jan 20, 2025 | 12:51 PM

ಬೆಳಗಾವಿ, ಜನವರಿ 20: ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧವೇ ಕೆಲವು ಮಂದಿ ಸಚಿವರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ಬಗ್ಗೆಯೇ ಹರಿಹಾಯ್ದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸುಳ್ಳು ಹೇಳಿ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸತೀಶ್ ಜಾರಕಿಹೊಳಿ ಆಪ್ತ ಆಸೀಫ್ ಸೇಠ್ ನಿವಾಸಕ್ಕೆ ಡಿಕೆ ಶಿವಕುಮಾರ್ ಭಾನುವಾರ ಭೇಟಿಕೊಟ್ಟಿದ್ದರು. ಹೀಗಾಗಿ, ಸತೀಶ್ ಆಪ್ತರ ಮನವೊಲಿಕೆಗೆ ಮುಂದಾದರೇ ಡಿಕೆಶಿ ಎಂಬ ಬಗ್ಗೆಯೂ ವರದಿಗಳು ಪ್ರಕಟವಾಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್, ನಿನ್ನೆ ಪಕ್ಷದ ಹಿರಿಯ ನಾಯಕರ ನಿವಾಸಕ್ಕೆ ಭೇಟಿ ನೀಡಿದ್ದೆ. ಜಗಳ ಇತ್ತು ಅದಕ್ಕೆ ಹೋಗಿದ್ದರು ಎಂದು ನೀವು (ಮಾಧ್ಯಮದವರು) ಹೇಳುತ್ತಿದ್ದೀರಿ. ಫಿರೋಜ್ ಸೇಠ್ ಹಿರಿಯರು, ಅವರ ಜತೆ ಕೆಲಸ ಮಾಡಿದ್ದೇವೆ. ಸಂಘಟನೆ ದೃಷ್ಟಿಯಿಂದ ನಿವಾಸಕ್ಕೆ ಹೋಗಿ ಬಂದಿದ್ದೆ ಎಂದರು.

‘ಸುರ್ಜೇವಾಲ ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತಿಲ್ಲ. ಅವರ ಬಗ್ಗೆ ರಾಹುಲ್ ಗಾಂಧಿಯವರಿಗೆ ದೂರು ನೀಡಬೇಕು. ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳುವಂತೆ ಒತ್ತಡ ಹೇರಬೇಕು’ ಎಂದು ಸಿಎಂ ಸಿದ್ದರಾಮಯ್ಯಗೆ ಕೆಲವು ಮಂದಿ ಸಚಿವರು ಆಗ್ರಹಿಸಿದ್ದಾರೆ ಎನ್ನಲಾಗಿತ್ತು.

ಗಾಂಧಿ ಭಾರತ ಸಮಾವೇಶದ ಬಗ್ಗೆ ಡಿಕೆಶಿ ಹೇಳಿದ್ದೇನು?

ಬೆಳಗಾವಿಯಲ್ಲಿ ನಾಳೆ ಗಾಂಧಿ ಭಾರತ ಕಾರ್ಯಕ್ರಮ ಪ್ರಯುಕ್ತ ದೆಹಲಿ ಹಾಗೂ ದೇಶದ ಮೂಲೆ ಮೂಲೆಯ ನಾಯಕರ ಜತೆ ಸಂಪರ್ಕದಲ್ಲಿದ್ದೆ. ಸುಮಾರು ಅರವತ್ತು ಜನ ಬೇರೆ ಬೇರೆ ಕಡೆಯಿಂದ ಬರುತ್ತಿದ್ದಾರೆ. ಬಹುತೇಕ ಎಲ್ಲ ಶಾಸಕರು, ಎಂಎಲ್ಸಿಗಳು ಬರುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಬರುವುದು ಖಚಿತವಾಗಿದೆ. ಜೈ ಭೀಮ್, ಜೈ ಗಾಂಧಿ, ಜೈ ಸಂವಿಧಾನ ಸಮಾವೇಶದ ಮೂಲಕ ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ಮರಣೆ ಮಾಡುವುದು ಹಾಗೂ ಸಂವಿಧಾನ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ರಣದೀಪ್ ಸುರ್ಜೇವಾಲ ವಿರುದ್ಧವೇ ಸಿಡಿದ ಸಚಿವರು: ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ

ದೆಹಲಿ ಚುನಾವಣೆ ಉಸ್ತುವಾರಿ ಸಿಎಂಗೆ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನೇ ಹೋಗಿ 2500 ರೂ. ಪ್ಯಾರಿ ದೀದಿಗೆ ಚಾಲನೆ ನೀಡಿದ್ದೇನೆ. ನಮ್ಮ ಮುಖ್ಯಮಂತ್ರಿಗಳು ಬಜೆಟ್ ತಯಾರಿಯಲ್ಲಿದ್ದಾರೆ. ಎಲ್ಲಾ ಇಲಾಖೆಯವರ ಜತೆ ಸಭೆ ನಡೆಸಬೇಕಿದೆ. ಬಜೆಟ್ ಸಿದ್ಧಪಡಿಸಬೇಕಿದೆ. ಈ ಕಾರಣಕ್ಕೆ ಚುನಾವಣೆ ಉಸ್ತುವಾರಿ ಬಿಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ