ನಾನು ಸುರಕ್ಷಿತವಾಗಿದ್ದೇನೆ, ನನಗೆ ಯಾವ ಅಪಾಯವೂ ಇಲ್ಲ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ
ಮೂರನೇ ವ್ಯಕ್ತಿಗಳು ತನಿಖೆಯನ್ನು ನಿರ್ಧರಿಸಬಾರದು ಎಂದು ಅವರು ವಾದಿಸಿದರು. ಈ ವೇಳೆ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ‘ನ್ಯಾಯ ಸಮ್ಮತ ತನಿಖೆ ನಡೆಸುವುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ. ನೀವು ಆಕ್ಷೇಪ ಎತ್ತಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ’ ಎಂದು ತಿಳಿಸಿದರು.
ಧಾರವಾಡ: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಯುವತಿ ತಂದೆ ದಾಖಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಗೊಳಿಸಿದೆ. ಈ ವೇಳೆ ವಿಡಿಯೋ ಸಂವಾದದಲ್ಲಿ ಹಾಜರಾದ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ತಾನು ಸುರಕ್ಷಿತವಾಗಿ ಇರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಯುವತಿಯ ಈ ಸ್ಪಷ್ಟೀಕರಣ ಆಲಿಸಿದ ಕೋರ್ಟ್ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಈ ಮುನ್ನ ಯುವತಿಯ ತಂದೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದ ಕಾರಣ ಯುವತಿ ಇರುವ ಸ್ಥಳಕ್ಕೆ ತೆರಳಲು ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಯುವತಿ ನಿವಾಸಕ್ಕೆ ಭೇಟಿ ನೀಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿ ಮಾತನಾಡಿದರು. ಈ ವೇಳೆ ತನ್ನ ತಂದೆಯೊಂದಿಗೆ ಸಮಾಲೋಚಿಸಲು ಯುವತಿ ನಕಾರ ವ್ಯಕ್ತಪಡಿಸಿದಳು. ಎಲ್ಲವೂ ಸರಿ ಹೋದಾಗ ತಂದೆ ಜೊತೆ ಮಾತನಾಡುತ್ತೇನೆ. ಸದ್ಯ ತಂದೆಯೊಂದಿಗೆ ಮಾತನಾಡುವುದಿಲ್ಲ ಎಂದ ಸಂತ್ರಸ್ತ ಯುವತಿ, ಅಕ್ರಮ ಬಂಧನದ ಆರೋಪ ನಿರಾಕರಿಸಿದಳು. ಹೀಗಾಗಿ ಕೋರ್ಟ್ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ? ಇದೇ ವೇಳೆ ಇಂದು (ಮೇ 31) ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (Central Bureau of Investigation – CBI) ತನಿಖೆ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಪ್ರಕರಣದ ತನಿಖೆಗೆಂದು ರಚಿಸಿರುವ ವಿಶೇಷ ತನಿಖಾ ದಳ (Special Investigation Team – SIT) ಹೈಕೋರ್ಟ್‌ಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಿತು. ಸೀಲ್ ಮಾಡಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಸೀಲ್ ತೆರೆದು ವಿಭಾಗೀಯ ಪೀಠ ಪರಿಶೀಲಿಸಿತು.
ಪೋಷಕರು ಸಲ್ಲಿಸಿದ್ದ ದೂರಿನಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂಬ ಹೇಳಿಕೆಯಿತ್ತು. ಯುವತಿ ನೀಡಿದ ಕೇಸ್‌ನ ತನಿಖೆ ಅಂತಿಮ ಹಂತದಲ್ಲಿದೆ ಎಂದು ಹೈಕೋರ್ಟ್‌ಗೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೇಳಿಕೆ ನೀಡಿದರು. ಸಂತ್ರಸ್ತ ಯುವತಿಯು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ಆ ಪತ್ರದ ಬಗ್ಗೆಯೂ ಹೈಕೋರ್ಟ್ ಎಸ್ಐಟಿಯಿಂದ ವರದಿ ಕೇಳಿತು.
ಸಿಬಿಐ ತನಿಖೆ ನಡೆಸಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ಸಲ್ಲಿಸಿದರು. ಮೂರನೇ ವ್ಯಕ್ತಿಗಳು ತನಿಖೆಯನ್ನು ನಿರ್ಧರಿಸಬಾರದು ಎಂದು ಅವರು ವಾದಿಸಿದರು. ಈ ವೇಳೆ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ‘ನ್ಯಾಯ ಸಮ್ಮತ ತನಿಖೆ ನಡೆಸುವುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ. ನೀವು ಆಕ್ಷೇಪ ಎತ್ತಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ’ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರು ಈವರೆಗೂ ಸಿಕ್ಕಿಲ್ಲ ಎಂದು ಸರ್ಕಾರ ಸಲ್ಲಿಸಿದ್ದ ವರದಿಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಯುಟ್ಯೂಬ್ನಲ್ಲಿ ಕರ್ನಾಟಕ ಹೈಕೋರ್ಟ್ ಕಲಾಪ ಮೊದಲ ಬಾರಿಗೆ ನೇರಪ್ರಸಾರ
Central Vista ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ (Ramesh Jarkiholi CD scandal case women says Iam safe to Karnataka High Court Dharwad bench in the hearing of Habeas Corpus filed by her father)
Published On - 5:08 pm, Mon, 31 May 21