ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್ಐಟಿ ತಂಡ ಇಂದು ಭೇಟಿ ನೀಡಿದೆ. ಆರ್.ಟಿ.ನಗರದ ಮನೆಗೆ ಎಸ್ಐಟಿ ತಂಡ ಭೇಟಿಕೊಟ್ಟಿತು. ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಮನೆಗೆ ಭೇಟಿಕೊಟ್ಟಿತು. ಈ ವೇಳೆ, ಯುವತಿ ವಾಸವಿದ್ದ ರೂಮ್ನ ಅಧಿಕಾರಿಗಳು ಪರಿಶೀಲಿಸಿದರು. ಬಳಿಕ, ಕಟ್ಟಡದ ಮಾಲೀಕರಿಂದ ಎಸ್ಐಟಿ ಟೀಮ್ ಮಾಹಿತಿ ಪಡೆಯಿತು. ಸಿಡಿಯಲ್ಲಿನ ಯುವತಿ ಇತ್ತೀಚೆಗೆ ನಿಮ್ಮನ್ನು ಸಂಪರ್ಕಿಸಿದ್ರಾ? ಆಕೆ ಇಲ್ಲಿದ್ದಾಗ ಬೇರೆ ಯಾರಾದರೂ ಇಲ್ಲಿಗೆ ಬರುತ್ತಿದ್ರಾ? ಎಂದು ಮನೆ ಮಾಲೀಕರನ್ನು ಪ್ರಶ್ನಿಸಿದರಂತೆ.
ಈ ವೇಳೆ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಸಂತ್ರಸ್ತೆ ನಾಪತ್ತೆ ಆಗಿದ್ದಳು. ಆದರೆ, 3-4 ದಿನದ ಹಿಂದೆ ನನಗೆ ಕರೆ ಮಾಡಿದ್ದರು ಎಂದು ಮನೆ ಮಾಲೀಕರು ಎಸ್ಐಟಿಗೆ ಮಾಹಿತಿ ನೀಡಿದ್ದಾರಂತೆ. ಅಷ್ಟೇ ಅಲ್ಲ, ಮಾಲೀಕರಿಗೆ ಕರೆಮಾಡಿ ಸಂತ್ರಸ್ತೆ ಕ್ಷಮೆ ಸಹ ಕೇಳಿದ್ದರು ಎಂಬ ಮಾಹಿತಿ ತಂಡಕ್ಕೆ ಲಭ್ಯವಾಗಿದೆ.
ಸಂಜೆ 6.30ರ ಸುಮಾರಿಗೆ ನಿವಾಸಕ್ಕೆ ಎಸ್ಐಟಿ ತಂಡ ಭೇಟಿ ನೀಡಿತ್ತು. 2 ಬಾರಿ ನೋಟಿಸ್ ನೀಡಿದರೂ ಸಂತ್ರಸ್ತೆ ಪ್ರತಿಕ್ರಯಿಸದ ಹಿನ್ನೆಲೆಯಲ್ಲಿ ಮನೆ ಮಾಲೀಕರಿಂದ ತಂಡ ಸುದೀರ್ಘ ಮಾಹಿತಿ ಪಡೆದಿದೆ. ಜೊತೆಗೆ, ಸಂತ್ರಸ್ತೆಗೆ ಸಂಬಂಧಿಸಿದ ಕೆಲ ವಸ್ತುಗಳು, ದಾಖಲೆಗಳು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯ ವೃತ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.
ಅಂದ ಹಾಗೆ, ನನ್ನ ಮಗಳನ್ನ ಅಪಹರಿಸಲಾಗಿದೆ ಎಂದು ನಿನ್ನೆ ದೂರು ದಾಖಲಾಗಿತ್ತು. ಬೆಳಗಾವಿಯ ಎಪಿಎಂಸಿ ಯಾರ್ಡ್ ಠಾಣೆಗೆ ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದರು.
‘ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು?’
ಇನ್ನು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಬ್ಲ್ಯಾಕ್ಮೇಲ್ ಮಾಡಿದವರಿಗೆ ಜಾರಕಿಹೊಳಿಯಿಂದ ಹಣ ಸಂದಾಯವಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು? ಇಲ್ಲಿ ಹಣಕಾಸು ಅವ್ಯವಹಾರ ನಡೆದಿರಬೇಕಲ್ಲವೇ? ಇಡಿ, ಆದಾಯ ತೆರಿಗೆ ಇಲಾಖೆಗಳು ಏಕೆ ಕಣ್ಮುಚ್ಚಿ ಕೂತಿವೆ?ತನಿಖಾ ಸಂಸ್ಥೆಗಳು ಇರುವುದು ಅಕ್ರಮ ತಡೆಯುವುದಕ್ಕಾ? ಅಥವಾ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದಕ್ಕಾ? ಎಂದು ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬ್ಲಾಕ್ಮೇಲ್ ಮಾಡಿದವರಿಗೆ ಜಾರಕಿಹೊಳಿಯವರಿಂದ ಹಣ ಸಂದಾಯವಾಗಿದೆ ಎಂದು ವರದಿಯಾಗಿದೆ.
-ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು?
-ಇಲ್ಲಿ ಹಣಕಾಸು ಅವ್ಯವಹಾರ ನಡೆದಿರಬೇಕಲ್ಲವೇ?
-ಐಟಿ, ಇಡಿ ಇಲಾಖೆಗಳು ಏಕೆ ಕಣ್ಮುಚ್ಚಿ ಕೂತಿವೆ?ತನಿಖಾ ಸಂಸ್ಥೆಗಳಿರುವುದು ಅಕ್ರಮ ತಡೆಯುವುದಕ್ಕಾ? ಅಥವಾ ವಿಪಕ್ಷಗಳ ಮೇಲೆ ದಾಳಿ ಮಾಡುವುದಕ್ಕಾ @BJP4Karnataka?
— Karnataka Congress (@INCKarnataka) March 17, 2021
ಇದನ್ನೂ ಓದಿ: ‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ
Published On - 9:39 pm, Wed, 17 March 21